Sunday, March 29, 2009

ಶುಷ್ಕ ವಕ್ರ ಈ ನಗೆ



ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ವ್ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.

ಅಹಮದಾಬಾದಿನ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದೀರಿ. ಎದುರಿಗೆ ಒಂದು ದೊಡ್ಡ ಫಲಕ. "ಕುಡಿದು ಕಾರನ್ನು ಓಡಿಸುವುದು ಅಪಾಯಕಾರಿ". ಸ್ವಾತಂತ್ರ ಬಂದಾಗಿನಿಂದಲೂ ಸಂಪೂರ್ಣ ಪಾನ ನಿಷೇಧ ಇರುವ ರಾಜ್ಯದ ಪ್ರಮುಖನಗರದ ಪೋಲೀಸು ಇಲಾಖೆ ಈ ಇಂಥ ಫಲಕವನ್ನು ಹಾಕಿದರೆ ನಿಮಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಈ ಫಲಕದ ಹಿಂದಿರಬಹುದಾದ ವಿಚಿತ್ರ ವಿಡಂಬನೆ - ಪಾನ ನಿಷೇಧವನ್ನು ಎಷ್ಟರ ಮಟ್ಟಿಗೆ ಆ ನಗರದಲ್ಲಿ ಸಫಲಗೊಳಿಸಿದ್ದಾರೆನ್ನುವ ಪ್ರಶ್ನೆಯಿಂದ ಹಿಡಿದು, ಗುಂಡುಸಿಗದ ಚಡಪಡಿಕೆಯ ನಡುವೆ ನಿಮ್ಮನ್ನು ಕುಹಕ ಮಾಡುತ್ತಿರುವ ಸರಕಾರದ ಸೇಡಿನ ಬಗೆಗಿನವರೆಗೂ ಆಲೋಚನೆ ಹೊರಟರೂ, ಕಡೆಗೆ ಮುಖದಲ್ಲಿ ಉಳಿಯುವುದು ಒಂದು ಮಂದಹಾಸವೇ.. ಇದು ಗುಂಡಿರದ ಗುಜರಾತಿನ ಡ್ರೈ ಹ್ಯೂಮರ್ರೋ, ರೈ ಹ್ಯುಮರ್ರೋ ತಿಳಿಯದು. 

ಹಾಗೆ ನೋಡಿದರೆ ಸಾಹಿತ್ಯದಲ್ಲಿ ವಿದೂಷಕನ ಪಾತ್ರವೇ ರೈಗೆ ಹೇಳಿಮಾಡಿಸಿದ್ದು. ದೊಡ್ಡ ದೊಡ್ಡ ಅಹಂನ ಬೆಲೂನುಗಳನ್ನು ಪುಟ್ಟ ಪುಟ್ಟ ಸೂಜಿಗಳಿಂದ ಚುಚ್ಚುವ, ಎಲ್ಲಿಂದ ಹೇಗೆ ಏಟು ಬಿತ್ತು ಎಂದು ತಿಳಿಯದಂತೆಯೇ ತಟ್ಟಿಸುವುದು "ಅಳುವುದೋ ನಗುವುದೋ ನೀವೇ ಹೇಳಿ" ಎನ್ನುವಂತೆ ಮಾಡಿಸುವ ತೆನಾಲಿ ರಾಮ ಮತ್ತು ಬೀರಬಲ್ಲರೂ ಈ ರೀತಿಯ ಹಾಸ್ಯದ ದೊಡ್ಡ ಉದಾಹರಣೆಗಳು. ಹೀಗಾಗಿ ವ್ರೈಯನ್ನು ಒಂದು ರೀತಿಯಲ್ಲಿ ವಿದೂಷಣ ಎಂದು ಕರೆಯಬಹುದೇನೋ! - ಇದೂ ಒಂದು ಬಗೆಯ ದೂಷಣವೇ.. ಆದರೆ ಅದು ಪಡೆಯುವ ರೂಪ ವಿಚಿತ್ರದ್ದಾದ್ದರಿಂದ ವಿದೂಷಣ.

ಹಾಲಿವುಡ್ಡಿನಲ್ಲಿ ವುಡೀ ಆಲೆನ್ ವಿದೂಷಣಕ್ಕೆ ಪ್ರಮುಖ ಉದಾಹರಣೆಯಾಗಿ ನಿಲ್ಲುತ್ತಾರೆ. "ವಾಟ್ಸ್ ಅಪ್ ಟೈಗರ್ ಲಿಲ್ಲಿ" ಅನ್ನುವ ಬಾಂಡ್ ಶೈಲಿಯ ಚಿತ್ರದ ಅಣಕವಾಡಿನಿಂದ ಹಿಡಿದು - ಸ್ಲೀಪರ್ ಅನ್ನುವ ಸೈನ್ಸ್ ಫಿಕ್ಷನ್ ಬಗೆಯ ಚಿತ್ರದಲ್ಲೂ ನಿಮಗೆ ಈ ವ್ರೈ ಕಾಣಸಿಗುತ್ತದೆ. ಸ್ಲೀಪರಿನಲ್ಲಿ ಎಲ್ಲವೂ ಭವಿಷ್ಯದಲ್ಲಿ ನಡೆಯುತ್ತದೆ. ಮೈಥುನಕ್ಕೂ ಒಂದು ಯಂತ್ರ! ಆ ಕಾರ್ಯದಿಂದ ಹೊಮ್ಮುವ ಸದ್ದುಗಳೂ ಸ್ಟೀರಿಯೋಫೋನಿಕ್ ಸರೌಂಡ್ ಸೌಂಡಿನಂತೆ ಹೊರಹೊಮ್ಮುತ್ತದೆ. 

ಹಾಗೆಯೇ ವುಡಿಯದಲ್ಲದ ಮತ್ತೊಂದು ಚಿತ್ರ ’ವಾಟ್ಸ್ ಸೋ ಬ್ಯಾಡ್ ಅಬೌಟ್ ಫೀಲಿಂಗ್ ಗುಡ್?" ಈ ಚಿತ್ರದಲ್ಲಿ ಒಂದು ಪಕ್ಷಿಯಿಂದಾಗಿ ಒಂದು ವೈರಸ್ ನಗರಾದ್ಯಂತ ಹಬ್ಬುತ್ತದೆ. ಆ ವೈರಸ್ಸಿನಿಂದಾಗಿ ನಗರದ ಜನರೆಲ್ಲಾ ಹಗುರವಾಗಿ ಖುಷಿಯಿಂದ ಇರುತ್ತಾರೆ. ಆದರೆ ಆ ನಗರದ ಮ್ಯುನಿಸಿಪಾಲಿಟಿ ಆ ವೈರಸ್ಸನ್ನು ತಡೆಗಟ್ಟಿ ಈ ರೋಗವನ್ನು ನಿರ್ನಾಮ ಮಾಡಬೇಕು. ಹೀಗೆ ಆ ವೈರಸ್ಸನ್ನು ಹಬ್ಬುವ ಆ ಪಕ್ಷಿಯನ್ನು ಹಿಡಿದು ’ಫೀಲಿಂಗ್ ಗುಡ್’ ರೋಗವನ್ನು ತಡೆಗಟ್ಟುವುದೇ ಚಿತ್ರದ ಕಥೆ..... ಯಾವುದು ರೋಗ, ಏನನ್ನು ತಡೆಗಟ್ಟಬೇಕು... 

ಹಿಂದಿ ಸಿನೇಮಾದಲ್ಲಿ ರೈನ ಪ್ರಯೋಗ ಮಾಡಿರುವವರಲ್ಲಿ ನನಗೆ ನೆನಪಾಗುವುದು ಶ್ಯಾಂ ಬೆನೆಗಲ್.  ಮಂಡಿ ಸಿನೇಮಾದಲ್ಲಿ ಕೋಠಿಯನ್ನು ನಡೆಸುವ ಶಬನಾ ಮನೆಯಲ್ಲಿ ನಾಸಿರುದ್ದೀನ್ ಶಾ ಕೆಲಸ ಮಾಡುತ್ತಿರುತ್ತಾನೆ. ಶಬನಾ ಬಳಿ ಒಂದು ಗಿಳಿ. ಗಿಳಿ ಪಂಜರದಲ್ಲಿ. ನಾಸಿರ್ ಅತೀ ಮೂರ್ಖ ಕೆಲಸಗಾರ. ಅವನು ಎರಡೂ ಕೈಯಲ್ಲಿ ನೀರು ತುಂಬಿದ ಬಕೆಟ್ಟನ್ನು ಹೊತ್ತು ತರುತ್ತಿರುವಾಗ ಗಿಳಿ ಪಂಜರದಿಂದ ಹಾರಿಹೋಗುತ್ತದೆ. ಅದನ್ನು ಹಿಡಿಯುವ ಕೆಲಸ ನಾಸಿರ್‍ ನದ್ದು. ಅವನು ಬಕೆಟ್ಟನ್ನು ಕೆಳಗಿಡದೆಯೇ ಗಿಣಿಯನ್ನು ಅಟ್ಟಿಸಿ ಮನೆಯೆಲ್ಲಾ ಓಡುತ್ತಾನೆ. ಮುಂದೆ ಸ್ಮಿತಾ ಪಾಟೀಲ್ ಪಾತ್ರವೂ ಅವಳಿಂದ ಹೀಗೇ ತಪ್ಪಿಸಿಹೋಗುವುದಕ್ಕೆ ಇದು ತಯಾರಿಯ ಸೀನಿನಂತೆ ಕಾಣುತ್ತದೆ. ಇಲ್ಲಿ ನಾಸಿರ್ ನ ಪ್ರಯತ್ನವನ್ನು ನೋಡಿ ನಗಬೇಕೇ?...

ತಿರುಮಲೇಶರ ಕಾವ್ಯದಲ್ಲಿ ನಮಗೆ ಸಾಕಷ್ಟು ವ್ರೈ ಸಿಗುತ್ತದೆ.
"ಅಶ್ವಿನಿಗೆ ಕುಂಡೆಯಲ್ಲೊಂದು ಕುರುವಾದ್ದರಿಂದ
ಅವಳು ಒಂದು ರೀತಿಯ ಲಾಸ್ಯದಿಂದ ನಡೆಯುತ್ತಾಳೆ
ಒಂದು ರೀತಿಯ ಆಲಸ್ಯದಿಂದ ಕೂಡುತ್ತಾಳೆ.
ಜನ ದಂಗಾಗಿದ್ದಾರೆ
ಇಂಥ ಮಾದಕ ನಡಿಗೆಯನ್ನು ಅವರು ಹಿಂದೆಂದೂ ನೋಡಿಯೇ ಇಲ್ಲ...."
ಇಲ್ಲಿ ಯಾರು ಯಾರನ್ನು ಯಾವರೀತಿಯಾಗಿ ಲೇವಡಿ ಮಾಡುತ್ತಿದ್ದಾರೆ ಅನ್ನುವುದು ತಿಳಿಯುವುದಕ್ಕೆ ಮುನ್ನವೇ ಚುರುಕು ಮುಟ್ಟಿ ಹೋಗಿರುತ್ತದೆ.

ಹೀಗೇ ಗುರುಪ್ರಸಾದ್ ಕಾಗಿನೆಲೆಯವರ ಬೀಜ ಕಥೆಯ ಭಾಗವನ್ನು ನೋಡಿ:
"ಟೆಸ್ಟಿಕಲ್ಲಿನ ಕ್ಯಾನ್ಸರು ತುಂಬಾ ಒಳ್ಳೆಯ ಕ್ಯಾನ್ಸರಂತೆ. ಪರೀಗೆ ಕ್ಯಾನ್ಸರಲ್ಲೂ ಒಳ್ಳೇದಿರುತ್ತೆ ಅಂತ ಗೊತ್ತಿರಲಿಲ್ಲ. ಫಣೀಶ ಹೇಳಿದ್ದ: 'ಅಕಸ್ಮಾತ್ ದೇವರು ಏನಾರ ಪ್ರತ್ಯಕ್ಷ ಆಗಿ ನಿನಗೆ ಯಾವುದಾದರೂ ಒಂದು ಕ್ಯಾನ್ಸರು ಬರಲೇಬೇಕು, ಲಂಗು, ಲಿವರು, ಕಿಡ್ನಿ, ಬ್ರೈನು, ಬ್ರೆಸ್ಟು ಯಾವುದು ಬೇಕು ಕೇಳ್ಕೋ ಅಂತ ಕೇಳಿದರೆ, ಗಂಡಸರಿಗೆ ಬೆಸ್ಟ್ ಅಂದರೆ ಟೆಸ್ಟಿಕಲ್ಲಿನ ಕ್ಯಾನ್ಸರ್ ಕೊಡಪ್ಪಾ ಅಂತ ಕೇಳ್ಕೋಬೇಕು, ಗೊತ್ತಾ. ಬರೀ ಕೀಮೋ ತೆಗೋಬೇಕಾದರೆ ಮಾತ್ರ ತೊಂದರೆ. ಆಮೇಲೆ, ನೂರಕ್ಕೆ ಆಲ್ಮೋಸ್ಟ್ ನೂರುಭಾಗ ವಾಸಿ ಆಗುತ್ತೆ." ಇದರಲ್ಲಿ ಕಾಣುವ ಹಾಸ್ಯ ಕಪ್ಪು ಹಾಸ್ಯವಲ್ಲ, ಒಂದು ರೀತಿಯ ತೀವ್ರ ವಿಡಂಬನೆಯಿಂದ ಕೂಡಿದ್ದು. 

ಅಂಗೂರ್ ಚಿತ್ರದಲ್ಲಿ ನಾಯಕನ ಸಹಾಯಕ ಹಗ್ಗ ಕೊಳ್ಳಲು ಹೋಗುತ್ತಾನೆ. ಅಂಗಡಿಯಲ್ಲಿ ಹಗ್ಗದ ಬೆಲೆ ವಿಚಾರಿಸುತ್ತಾನೆ. ಅಂಗಡಿಯವನು ಯಾವುದಕ್ಕೆ ಉಪಯೋಗಿಸುತ್ತೀರಿ? ಅನ್ನುವುದಕ್ಕೆ ಸಹಾಯಕ ಗಂಭೀರವಾಗಿಯೇ "ನೇಣು ಹಾಕಿಕೊಳ್ಳಲು" ಎನ್ನುತ್ತಾನೆ. ಅಂಗಡಿಯವನು... "ಅದು ಬೇಡ, ಇದು ತೆಗೊಳ್ಳಿ ಮಜಬೂತಾಗಿದೆ" ಅನ್ನುತ್ತಾ ಬೇರೆಯದೇ ಒಂದು ಹಗ್ಗವನ್ನು ಎತ್ತಿ ಕೊಡುತ್ತಾನೆ. ಆ ಹಗ್ಗದ ಮೇಲೆ ಚೌಕಾಶಿ ನಡೆಯುತ್ತದೆ. ಈ ಘಟನೆಯನ್ನು ಮಿಕ್ಕ ಘಟನಾವಳಿಯ ನಡುವೆ ಜೋಡಿಸದೇ ಕಂಡರೆ ವ್ರೈ ಎನ್ನಬಹುದು. ಆದರೆ, ಆ ಘಟನೆ ನಡೆಯುವುದೇ ಬೇರೊಂದು ಪರಿಸ್ಥಿತಿಯಲ್ಲಿ. ಅಲ್ಲಿ ಯಾರಿಗೂ ನೇಣು ಹಾಕಿಕೊಳ್ಳುವ ಉದ್ದೇಶವಿಲ್ಲ ಅನ್ನುವುದು ನೋಡುಗನಿಗೆ ಗೊತ್ತು. ಹೀಗಾಗಿ ಅದು ಶುದ್ಧ ಹಾಸ್ಯವಾಗಿ ಯಾವ ವಿಶೇಷಣಕ್ಕೂ ಅರ್ಹವಾಗುವುದಿಲ್ಲ!

ಚಾರ್ಲಿ ಚಾಪ್ಲಿನ್ ಚಿತ್ರಗಳು ಸ್ಲಾಪ್ ಸ್ಟಿಕ್ಕಿನಂತೆ ಕಂಡರೂ ಅದರಲ್ಲಿನ ಹಾಸ್ಯ ಒಮ್ಮೊಮ್ಮೊ ಡಾರ್ಕ್ ಆಗಿಯೂ ಹೆಚ್ಚಾಗಿ ರೈ ಆಗಿಯೂ ಇರುವುದನ್ನು ನೋಡಬಹುದು. ಕಿಡ್ ಚಿತ್ರದಲ್ಲಿ ಮೊಳೆ ತಿನ್ನುವ ಪ್ರಸಂಗ, ಗ್ರೇಟ್ ಡಿಕ್ಟೇಟರ್ ನಲ್ಲಿ ಭೂಗೋಳದ ಬಲೂನನ್ನ ಹಿಡಿದು ಕುಣಿಡಾಡುತ್ತಿರುವ ಚಾಪ್ಲಿನ್... ಹಾಗೂ ಅದು ಟಪ್ಪೆಂದು ಅವನ ಮುಖದಲ್ಲಿ ಸ್ಫೋಟಗೊಳ್ಳುವ ರೀತಿ ವ್ರೈನ ನಮೂನೆ! ಮಾಡರ್ನ್ ಟೈಮ್ಸ್ ನಲ್ಲಿ ದೊಡ್ಡ ಟ್ರಕ್ಕಿನ ಹಿಂದೆ ಒಂದು ಕೆಂಪು ಬಣ್ಣದ ಬಟ್ಟೆ ನೇತಾಡುತ್ತಿರುವುದನ್ನು ಚಾಪ್ಲಿನ್ ಹಿಡಿದಾಗ ಅವನನ್ನು ಕಮ್ಯುನಿಸ್ಟ್ ಎಂದು ಬಂಧಿಸುವ ಘಟನೆ ರೈನ ಲಕ್ಷಣವನ್ನು ತೋರಿಸುತ್ತದೆ. ಕಪ್ಪು ಬಿಳುಪು ಚಿತ್ರದಲ್ಲಿ - ಮಾತೇ ಇಲ್ಲದ ಮೂಕಿಯಲ್ಲಿ ಆ ಬಟ್ಟೆಯ ಬಣ್ಣವನ್ನು ಎಷ್ಟು ಸಶಕ್ತವಾಗಿ ’ಕೆಂಪು’ ಎನ್ನುವ ನಂಬಿಕೆ ಬರುವಂತೆ ಚಾಪ್ಲಿನ್ ಮಾಡುತ್ತಾರೆ ಎಂದು ಕಂಡಾಗ ಆ ಕಲೆ ಎಲ್ಲವನ್ನೂ ಮೀರಿ ನಿಲ್ಲುವುದಿಲ್ಲವೇ? 

ಹಾಗೆ ನೋಡಿದರೆ ಚಾಪ್ಲಿನ್ ಕ್ಯಾಥೋಲಿಕ್ ಕ್ರಿಸ್ಟಿಯನ್ ಅನ್ನುವ ಮಂಗಳೂರಿನವರ ಕುಹಕ ಯಾವ ಬ್ರಾಂಡಿನ ಹಾಸ್ಯವೋ ನನಗೆ ತಿಳಿಯದು. ಹೀಗೆಯೇ ಪ್ರಮೋದ್ ಮುತಾಲಿಕ್ ಗೆ ಪಿಂಕ್ ಚೆಡ್ಡಿಗಳನ್ನು ಕಳಿಸಿದ ಮುಂಬೈಯಿನ ಪಬ್-ಗೋಯಿಂಗ್, ಲೂಸ್, ಫಾರ್ವಡ್ ವುಮೆನ್ ಮಾಡಿದ ಚರ್ಯೆಯಲ್ಲಿ ಐರನಿ, ಸಟೈರು, ಕುಹಕ ವಿದ್ದರೂ ರೈ ಇರಲಿಲ್ಲವೆನ್ನಿಸುತ್ತದೆ. ಆದರೆ ನಾವಿರುತ್ತಿರುವ ಹುಚ್ಚು ಪ್ರಪಂಚದಲ್ಲಿ ನಮಗೆ ಒಂದು ಕಿರುನಗು ಬೀರಲೂ ಯಾವುದೇ ಬ್ರಾಂಡಿನ ಹಾಸ್ಯದ ಅವಶ್ಯಕತೆಯಿರಬಹುದು! ಆದರೆ ಕಾಮೆಡಿ ಕಿಲಾಡಿಗಳು ಅನ್ನುವ ಹಾಸ್ಯವನ್ನೇ ಮಾರ ಹೊರಟ ಚಿತ್ರಹಿಂಸಾತ್ಮಕ ಕಾರ್ಯಕ್ರಮದ ಹಿಂದೆ ಯಾವ ರೀತಿಯ ಪ್ರಾಕ್ಟಿಕಲ್ ಹಾಸ್ಯವಿರಬಹುದು. ಯಾರಿಗಾದರೂ ತಿಳಿದರೆ ಅದರ ಮೀಮಾಂಸೆ ನನಗೆ ಕಳಿಸಿ ಪ್ಲೀಸ್....


  

No comments:

Post a Comment