Monday, March 9, 2009

ಕಾವೇರಿ ಆದೇಶ: ಕೆಲವು ಪ್ರಶ್ನೋತ್ತರಗಳು

ಮೂಲ: ರಾಮಸ್ವಾಮಿ. ಆರ್. ಐಯ್ಯರ್ ಅನುವಾದ: ಎಂ.ಎಸ್.ಶ್ರೀರಾಮ್. [ಲೇಖಕರು ೧೯೫೩ರಿಂದ ೧೯೯೦ರವರೆಗೆ ಐ.ಎ.ಎಸ್ ಅಧಿಕಾರಿಯಾಗಿ ಸರಕಾರದಲ್ಲಿ ಕೆಲಸ ಮಾಡಿದವರು. ೧೯೮೫ರಿಂದ ಹೆಚ್ಚಾಗಿ ಜಲಸಂಪನ್ಮೂಲ, ಅದಕ್ಕೆ ಸಂಬಂಧಿಸಿದ ಸರಕಾರಿ ನೀತಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಬರವಣಿಗೆಯನ್ನು ಮಾಡಿದ್ದಾರೆ. ೧೯೮೫-೮೭ರ ನಡುವೆ ಭಾರತ ಸರಕಾರದಲ್ಲಿ ಅವರು ನೀರಾವರಿ ವಿಭಾಗದ ಸಚಿವರಾಗಿದ್ದರು. ೧೯೯೦-೯೯ ನಡುವೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ದುಡಿದರು. ಜಲಸಂಪನ್ಮೂಲಗಳ ಬಗ್ಗೆ ಅವರು ವಿಸ್ತಾರವಾಗಿ ಬರೆದಿದ್ದಾರೆ ಹಾಗೂ ಅನೇಕ ತಜ್ಞಸಮಿತಿಗಳಲ್ಲಿ ಭಾಗವಹಿಸಿದ್ದಾರೆ. ಈ ಲೇಖನ ಫೆಬ್ರವರಿ ೨೭, ೨೦೦೭ರ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ [EPW] ಪತ್ರಿಕೆಯಲ್ಲಿ ಪ್ರಕಟವಾಯಿತು. ಲೇಖನವನ್ನು ಅನುವಾದಿಸಿ ಪ್ರಕಟಿಸಲು ಅನುಮತಿ ನೀಡಿದ ಅಯ್ಯರ್ ಅವರಿಗೂ, ಈಪಿಡಬ್ಲು ಪತ್ರಿಕೆಗೂ ಕೃತಜ್ಞತೆಗಳು. ಕಾವೇರಿಯ ಬಗ್ಗೆ ಮಾಹಿತಿಯೊಂದಿಗಿನ ಚರ್ಚೆಯಾಗಲಿ ಅನ್ನುವ ಉದ್ದೇಶದಿಂದ ಇದನ್ನು ಇಲ್ಲಿ ಹಾಕುತ್ತಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ತಿಳುವಳಿಕೆ ಇಲ್ಲವಾದ್ದರಿಂದ ನಾನು ಈ ಬಗ್ಗೆ ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಚರ್ಚೆಯಲ್ಲಿ ಏನಾದರೂ ಪ್ರಶ್ನೆಗಳು ಉದ್ಭವವಾದರೆ ಅದನ್ನು ಅಯ್ಯರ್ ಅವರ ಬಳಿಗೆ ಒಯ್ದು ಅವರ ಉತ್ತರವನ್ನು ಹಾಕುವುದಕ್ಕೆ ನಾನು ಸಿದ್ಧ, ಒಟ್ಟಿನಲ್ಲಿ ಆರೋಗ್ಯಪೂರ್ಣ ಚರ್ಚೆ ಆಗಬೇಕೆನ್ನುವುದಷ್ಟೇ ನನ್ನ ಉದ್ದೇಶ. ಮೂಲ ಲೇಖನವನ್ನು ಓದಬಯಸಿದವರು ಅದನ್ನು ಇಲ್ಲಿ ಕಾಣಬಹುದು.ಈ ಅನುವಾದವನ್ನು ಯಾರ ಕೈಲಾದರೂ ಒಮ್ಮೆ ಓದಿಸಿ ಅಂತ ಅಯ್ಯರ್ ನನ್ನನ್ನು ಕೋರಿದ್ದರು. ಹೀಗಾಗಿ ಅದನ್ನು ಪ್ರಿಯ ಎಚ್.ಎಸ್.ಆರ್ ಅವರಿಗೆ ಕಳಿಸಿದ್ದೆ. ಆದರೆ ಅವರಿಗೆ ಸಮಯಾವಕಾಶವಾಗಲಿಲ್ಲ ಅನ್ನಿಸುತ್ತದೆ. ಹೀಗಾಗಿ ನಾನು ಎರಡನೇ ಅಭಿಪ್ರಾಯವಿಲ್ಲದೆಯೇ ಇದನ್ನು ಹಾಕುತ್ತಿದ್ದೇನೆ. ಈ ಲೇಖನ ಅನುವಾದಿಸುತ್ತಿರುವಾಗ ಕರ್ನಾಟಕದಿಂದ ಸಿಟ್ಟಿನ ಪತ್ರಗಳು ಅಯ್ಯರ್ ಅವರಿಗೆ ಹೋದುವೆಂದು ಅವರು ನೊಂದು ಬರೆದಿದ್ದರು. ದಯವಿಟ್ಟು ಈ ಲೇಖನವನ್ನು ಓದಿ ಪ್ರತಿಕ್ರಿಯಿಸುವವರು ಅದರಲ್ಲಿನ ವಾಸ್ತವಾಂಶಗಳ ಬಗ್ಗೆ ಚರ್ಚಿಸಿದರೆ ಆ ಚರ್ಚೆಯನ್ನು ಮುಂದುವರೆಸಲು ಉಪಯುಕ್ತವಾಗುತ್ತದೆ.] 

ಬಹಳ ದಿನಗಳಿಂದ ನಿರೀಕ್ಷಿಸಿದ್ದ ಕಾವೇರಿ ಆಯೋಗದ ಅಂತಿಮ ತೀರ್ಪು ಕಡೆಗೂ ಬಂದಿದೆ. ಮೊದಲಿಗೆ ಆಯೋಗದಲ್ಲೇ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂಬ ಸೂಚನೆಗಳು ಇದ್ದುವಾದರೂ ಅದು ಸರ್ವಾನುಮತದ ತೀರ್ಪೆಂಬುದು ತೃಪ್ತಿಯ ಮಾತು. ಇದರಿಂದ ಆಯೋಗ ಮುಕ್ತಿ ಪಡೆದಂತಾಗಿದೆ. ಈ ಲೇಖನದ ಮುಖ್ಯ ಉದ್ದೇಶ ಆಯೋಗದ ತೀರ್ಪಿಗೆ ಪತ್ರಿಕೆಗಳಲ್ಲಿ ಬಂದಿರುವ ಕೆಲ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಅವುಗಳ ವಿಷಯದಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನೀಡುವುದಕ್ಕೆ ಸೀಮಿತವಾಗಿದೆ. ಕಾವೇರಿ ವಿವಾದದ ಇತಿಹಾಸ, ಅಲ್ಲಿಂದ ಮುಂದೆ ನಡೆದ ಪ್ರಕ್ರಿಯೆಗಳು ಮತ್ತು ಅಂತಿಮವಾಗಿ ಬಂದ ತೀರ್ಪು - ಈ ಘಟ್ಟಗಳನ್ನು ಮೊದಲಿಗೆ ಪರಿಶೀಲಿಸೋಣ. ನಂತರ ತೀರ್ಪಿನ ಹೂರಣವನ್ನು ಅರ್ಥಮಾಡಿಕೊಳ್ಳೋಣ. ತದನಂತರ ಈ ತೀರ್ಪಿಗೆ ಬಂದ ಪ್ರತಿಕ್ರಿಯೆಗಳನ್ನು ಚರ್ಚಿಸೋಣ. [ಈ ವಿವಾದದ ಇತಿಹಾಸವು ಇದೇ ಲೇಖಕರ ಹಿಂದಿನ ಬರಹಗಳ ಮೇಲೆ ಆಧರಿತವಾಗಿವೆ]

ಕಾವೇರಿ ಅನ್ನುವುದು ಕಾವೇರಿ ಮತ್ತು ಅದರ ಉಪನದಿಗಳಾದ ಹೇಮಾವತಿ, ಕಬಿನಿ, ಭವಾನಿ, ಅಮರಾವತಿ, ಮತ್ತಿತರ ಸಣ್ಣ ನದಿಗಳಿಂದ ಒಡಗೂಡಿದ ಒಂದು ನದೀಪದ್ಧತಿ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಮುಖ್ಯ ರಾಜ್ಯಗಳೆಂದರೆ ಕರ್ನಾಟಕ ಮತ್ತು ತಮಿಳುನಾಡು. ಈ ಜಲಾನಯನದ ಪುಟ್ಟ ಭಾಗ ಕೇರಳದಲ್ಲೂ, ಅಂತಿಮ ಭಾಗ ಪುದುಚ್ಚೇರಿಯ ಭಾಗವಾಗಿರುವ ಕರೈಕಲ್‍ನಲ್ಲೂ ಇದೆ. 

ವಿವಾದದ ಇತಿಹಾಸ


ಕಾವೇರಿ ವಿವಾದದ ಇತಿಹಾಸ ಹತ್ತೊಂಬತ್ತನೇ ಶತಮಾನದಷ್ಟು ಹಿಂದಿನದ್ದಾಗಿದೆ. ಆಗ್ಗೆ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಮದ್ರಾಸು ಪ್ರೆಸಿಡೆನ್ಸಿ ಮತ್ತು ಮೈಸೂರಿನ ರಾಜವಂಶದ ಆಳ್ವಿಕೆಯ ನಡುವೆ ಈ ವಿವಾದ ಎದ್ದಿತ್ತು. ವಿವಾದದ ಮೂಲ ಪ್ರಶ್ನೆಯೆಂದರೆ ಮದ್ರಾಸು ಪ್ರೆಸಿಡೆನ್ಸಿಯಲ್ಲಿರುವ ಜನರ ಹಿತಕ್ಕೆ ಧಕ್ಕೆಯಾಗದಂತೆ ಮೈಸೂರು ರಾಜ್ಯದಲ್ಲಿ ಅಣೆಕಟ್ಟುಗಳನ್ನೂ ನೀರಾವರಿಗೆ ಅನುಕೂಲವಾಗುವಂತಹ ಇತರ ಕೆಲಸಕಾರ್ಯಗಳನ್ನು ಹೇಗೆ ಕೈಗೊಳ್ಳುವುದು ಅನ್ನುವುದರ ಬಗ್ಗೆಯೇ ಆಗಿತ್ತು. ಸುಮಾರುದಿನಗಳ ಚರ್ಚೆಯ ನಂತರ ೧೮೯೨ರಲ್ಲಿ ಒಂದು ಒಪ್ಪಂದ ಆಗಿತ್ತು; ಮತ್ತೆ ವಿವಾದ; ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ಮಧ್ಯಸ್ತಿಕೆ; ಮಧ್ಯಸ್ತಿಕೆಯ ನಿರ್ಧಾರದ ವಿರುದ್ಧ ಲಂಡನ್‍ನಲ್ಲಿದ್ದ ಮುಖ್ಯಸಚಿವರ ಮುಂದೆ ಮನವಿ ಸಲ್ಲಿಕೆ; ಮತ್ತು ಸಚಿವರ ಸೂಚನೆಯ ಮೇರೆಗೆ ಮತ್ತೆ ಮಾತುಕತೆಯ ಮುಂದುವರಿಕೆ; ಕಡೆಗೆ ೧೯೨೪ರಲ್ಲಿ ಮತ್ತೊಂದು ಒಪ್ಪಂದ. ಆ ಒಪ್ಪಂದದ ವಿವರಗಳನ್ನು ಇಲ್ಲಿ ಪರಿಶೀಲಿಸುವುದಿಲ್ಲವಾದರೂ, ಆ ಬಗ್ಗೆ ಮುಂದೆ ಪ್ರಸ್ತಾಪ ಮಾಡುತ್ತೇನೆ. ಆದರೆ ಅದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆ ಒಪ್ಪಂದದ ಕೆಲವು ಕರಾರುಗಳನ್ನು ೫೦ ವರ್ಷಗಳ ನಂತರ ಅಂದರೆ ೧೯೭೪ ರಲ್ಲಿ ಮರುಪರಿಶೀಲಿಸಲು ಆಸ್ಪದವಿತ್ತು. ಆದರೆ ೧೯೭೪ರಲ್ಲಿ ಅದರ ಮರುಪರಿಶೀಲನೆ ಆಗಲಿಲ್ಲ. ಆ ಒಪ್ಪಂದವನ್ನು ನವೀಕರಿಸಲೂ ಇಲ್ಲ - ಅದನ್ನು ಸಮಾಪ್ತಿಗೊಳಿಸಲೂ ಇಲ್ಲ. [೧೮೯೨ರ ಮತ್ತು ೧೯೨೪ರ ಒಪ್ಪಂದಗಳು ಮುಂದುವರೆದಿದ್ದವೇ? ಮದರಾಸು ಪ್ರೆಸಿಡೆನ್ಸಿಗೂ ಮೈಸೂರು ಸಂಸ್ಥಾನಕ್ಕೂ ನಡೆದ ಒಪ್ಪಂದ ನಂತರ ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಚಿತವಾದ ತಮಿಳುನಾಡು ಮತ್ತು ಕರ್ನಾಟಕವೆಂಬ ಹೊಸ ಪ್ರದೇಶಕ್ಕೂ ಅನ್ವಯಗೊಂಡವೇ ಅನ್ನುವುದೂ ಈ ರಾಜ್ಯಗಳ ನಡುವಿನ ವಿವಾದದ ಅಂಶಗಳಲ್ಲೊಂದು]. ಈಗಿನ ರೂಪದಲ್ಲಿ ನಮ್ಮೆದುರಿಗಿರುವ ಕಾವೇರಿ ವಿವಾದ ಪ್ರಾರಂಭವಾಗುವುದು ೧೯೭೦ರ ಸರಿಸುಮಾರಿಗೆ. ಈ ವಿವಾದ ಕಾವೇರಿಯ ನೀರನ್ನು ಈ ನಾಲ್ಕೂ [ಕರ್ನಾಟಕ, ತಮಿಳುನಾಡು, ಕೇರಳ, ಪುದುಚ್ಚೇರಿ] ರಾಜ್ಯಗಳು ಹಂಚಿಕೊಳ್ಳುವುದರ ಬಗ್ಗೆ ಆಗಿತ್ತು. 

ಆಯೋಗದ ರಚನೆಕರ್ನಾಟಕ ತಮಿಳುನಾಡಿನ ನಡುವೆ ೧೯೭೦ ರಿಂದಾರಂಭವಾಗಿ ಎರಡು ದಶಕಗಳ ವರೆಗೂ ಆಗಾಗ ಮಾತುಕತೆ ನಡೆಯುತ್ತಲೇ ಬಂದಿತ್ತಾದರೂ ಯಾವ ಫಲವೂ ದೊರೆತಿರಲಿಲ್ಲ. ಈ ರಾಜ್ಯಗಳ ನಡುವೆ ಒಪ್ಪಂದವಾಗುವಂತೆ ಅನೇಕಬಾರಿ ಕೇಂದ್ರ ಸರಕಾರ ಪ್ರಯತ್ನಮಾಡಿದರೂ ಫಲ ಸಿಕ್ಕಿರಲಿಲ್ಲ. ೧೯೭೨ರಲ್ಲಿ ವಾಸ್ತವಾಂಶಗಳನ್ನು ಕಂಡುಹಿಡಿಯಲು ನಿಯಮಿಸಿದ ಕಮಿಟಿಯ ಮತ್ತು ತಜ್ಞರ ಮತ್ತೊಂದು ಕಮಿಟಿಯ ಶಿಫಾರಸಿನ ಆಧಾರವಾಗಿ ಆಗಸ್ಟ್ ೧೯೭೬ರಲ್ಲಿ ಒಂದು ಒಪ್ಪಂದವನ್ನು ತಯಾರಿಸಲಾಗಿತ್ತು. ಈ "ಒಪ್ಪಂದ"ವನ್ನು ಲೋಕಸಭೆಯಲ್ಲೂ ಘೋಷಿಸಲಾಯಿತು. ದುರಂತವೆಂದರೆ ಆ ಘೋಷಣೆ ಅವಸರದ್ದಾಗಿತ್ತು. ಆಗ ತಮಿಳುನಾಡು ಕೆಲಕಾಲದ ಮಟ್ಟಿಗೆ ಕೇಂದ್ರದ ಆಳ್ವಿಕೆಯಡಿಯಿದ್ದು ಚುನಾಯಿತ ಸರಕಾರ ಬರುವವರೆಗೂ ಕಾಯುವುದು ಒಳ್ಳೆಯದು ಎಂದು ನಿರ್ಧರಿಸಲಾಯಿತು; ಮುಂದೆ ಎಐಎಡಿಎಂಕೆಯ ಚುನಾಯಿತ ಸರಕಾರ ಅಧಿಕಾರ ಸ್ವೀಕರಿಸಿದಾಗ ಅದು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಲಿಲ್ಲ. ಅದಕ್ಕೆ ಕಾರಣ ಈ ಒಪ್ಪಂದ ಅವರಿಗೆ ಸಂಪೂರ್ಣ ಸಮಾಧಾನವನ್ನು ಒದಗಿಸಿರಲಿಲ್ಲ. ಆಗ ವಿವಾದಕ್ಕೆ ತೆರೆ ಬೀಳಬಹುದೆಂಬ ಆಶಾವಾದದ ವಾತಾವರಣ ಇಲ್ಲವಾಯಿತು.

ಆನಂತರವೂ ಕೇಂದ್ರ ಸರಕಾರ ಈ ವಿವಾದವನ್ನು ಇತ್ಯರ್ಥ ಮಾಡಲು ಪ್ರಯತ್ನಗಳನ್ನು ಮುಂದುವರೆಸುತ್ತಲೇ ಇತ್ತು, ಆದರೆ ಮುಖ್ಯಮಂತ್ರಿಗಳ ಮಟ್ಟದಲ್ಲಿ ಚರ್ಚೆಯೇ ಆಗದಿದ್ದ ಕಾರಣ ಈ ವಿವಾದ ಇತ್ಯರ್ಥವಾಗದೆಯೇ ನಿಂತುಬಿಟ್ಟಿತು. ಕಡೆಗೆ ೧೯೮೬ರಲ್ಲಿ ತಮಿಳುನಾಡು ಸರಕಾರ ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ ೧೯೫೬ರಡಿಯಲ್ಲಿ ಈ ವಿವಾದವನ್ನು ಇತ್ಯರ್ಥ ಮಾಡಲು ಒಂದು ಆಯೋಗವನ್ನು ನಿಯಮಿಸಬೇಕೆಂದು ಕೋರಿಕೆ ನೀಡಿತು. ಹಲವು ಕಾರಣಗಳಿಗಾಗಿ ಕೇಂದ್ರ ಸರಕಾರ ಇಂಥ ಆಯೋಗವನ್ನು ತಕ್ಷಣವೇ ನಿಯಮಿಸಲಿಲ್ಲ; ಬದಲಿಗೆ ಮಾತುಕತೆಯಿಂದ ಇದನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬುದೇ ಸರಕಾರದ ಇರಾದೆಯಾಗಿತ್ತು. ಈ ಮಧ್ಯದಲ್ಲಿ ಬಹಳದಿನಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾಯಿದೆಬಿದ್ದಿದ್ದ ಕಾವೇರಿಯಿಂದ ನೀರನ್ನು ನೀರಾವರಿಗೆ ಪೂರೈಸಬೇಕೆನ್ನುವ ತಮಿಳುನಾಡಿನ ಕೆಲ ರೈತರ ಮನವಿ ವಿಚಾರಣೆಗೆ ಬಂದಿತು. ಸರ್ವೋಚ್ಚ ನ್ಯಾಯಾಲಯ ಆವರೆಗೆ ನಡೆದಿದ್ದ ಮಾತುಕತೆಯ ವಿಫಲತೆ, ಹಾಗೂ ಆಯೋಗವನ್ನು ನಿಯಮಿಸಬೇಕೆನ್ನುವ ತಮಿಳುನಾಡು ಸರಕಾರದ ಕೋರಿಕೆ ಹಾಗೇ ಇದ್ದದ್ದನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ತಿಂಗಳೊಳಗಾಗಿ ಇಂಥ ಆಯೋಗವನ್ನು ನಿಯಮಿಸಬೇಕೆಂಬ ಆದೇಶ ಹೊರಡಿಸಿತು. ಹೀಗೆ ಭಾರತ ಸರಕಾರ ಜೂನ್ ೨, ೧೯೯೦ರಂದು ಕಾವೇರಿ ಜಲಕ್ಕೆ ಸಂಬಂಧಿಸಿದ ಆಯೋಗವನ್ನು ನಿಯಮಿಸಿತು. 

ಭಾರತೀಯ ಸಂಯುಕ್ತ ವ್ಯವಸ್ಥೆಯಡಿಯಲ್ಲಿ ಸಂವಿಧಾನದ ೨೬೨ನೇ ಕಲಮು ಮತ್ತು ಆ ಕಲಮಿನಡಿಯಲ್ಲಿ ರಚಿಸಿರುವ ೧೯೫೬ರ ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ ಈ ವಿಷಯ ಪರಿಹಾರದ ಮೂಲಭೂತ ಆಧಾರವಾಗಿದೆ; ಈ ಚೌಕಟ್ಟು ರಾಜ್ಯಗಳ ನಡುವಿನ ಜಲಮೂಲಗಳ ಬಗೆಗಿನ ವಿವಾದಗಳನ್ನು ಪರಿಹರಿಸಿಕೊಳ್ಳಲು ಇರುವ ಮಾರ್ಗ. ಈ ಕಾಯಿದೆಯನ್ವಯವೇ ಕೃಷ್ಣಾ, ಗೋದಾವರಿ, ನರ್ಮದಾ ಆಯೋಗಗಳೂ ಹಿಂದೆ ಸ್ಥಾಪಿತವಾಗಿದ್ದು, ಅದೇ ಕಾಯಿದೆಯಡಿಯಲ್ಲಿ ೧೯೯೦ರಲ್ಲಿ ಕಾವೇರಿ ಆಯೋಗವನ್ನೂ ಸ್ಥಾಪಿಸಲಾಯಿತು. ಈ ವ್ಯವಸ್ಥೆ ಕೆಲಸಮಾಡುತ್ತಿದ್ದ ರೀತಿ, ಅದಕ್ಕೆ ಬೇಕಿದ್ದ ಬದಲಾವಣೆಗಳು, ಹಾಗೂ ಕಾಯಿದೆಗೆ ೨೦೦೨ರಲ್ಲಿ ತಂದ ಬದಲಾವಣೆಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಬದಲಿಗೆ ಕಾವೇರಿ ವಿವಾದದ ಮಟ್ಟಿಗೆ ಮೊದಲಿನಿಂದಲೂ ಇತ್ಯರ್ಥದ ಮಾರ್ಗ ಕಡಿದಾದದ್ದಾಗಿತ್ತು ಅಂದಷ್ಟೇ ಹೇಳಬಹುದು.
 

ವಿವಾದದ ರೂಪುರೇಶೆಗಳು 


ಈ ವಿವಾದದ ಸಾರ ಇರುವುದು ನೀರಾವರಿಯಾಧಾರದ ಮೇಲೆ ಕೃಷಿಯನ್ನು ಕಾಲಾಂತರದಿಂದ ಕೈಗೊಳ್ಳುತ್ತಾ ಬಂದಿರುವ, ಆ ಕಾರಣದಿಂದ ಕಾವೇರಿಯ ನೀರನ್ನು ಬಳಸುತ್ತಿರುವ, ಆದರೆ ನದಿಪ್ರವಾಹದ ಅಂತಿಮ ತುದಿಯಲ್ಲಿರುವ [ತಮಿಳುನಾಡು] ಮತ್ತು ಪ್ರವಾಹದಾದಿಯಲ್ಲಿರುವ, ನೀರಾವರಿ ಯೋಜನೆಗಳನ್ನು ನಂತರ ಕೈಗೊಂಡ, ಆದರೆ ತ್ವರಿತಗತಿಯಲ್ಲಿ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ, ಮೇಲ್ಮಟ್ಟದಲ್ಲಿರುವ ಕಾರಣಕ್ಕಾಗಿ ಜಲಸಂಪನ್ಮೂಲದ ಮೇಲೆ ಹೆಚ್ಚಿನ ಹತೋಟಿಯಿರುವ ರಾಜ್ಯವಾದ ಕರ್ನಾಟಕದ ಅವಶ್ಯಕತೆಗಳ ನಡುವಿನ ಜಟಾಪಟಿಗೆ ಸಂಬಂಧಿಸಿದ್ದು. ಮೇಲ್ಮಟ್ಟದಲ್ಲಿರುವ ಆದರೆ ಜಲಸಂಪನ್ಮೂಲವನ್ನು ಮಿತವಾಗಿ ಆಶಿಸುತ್ತಿರುವ ಕೇರಳ, ಮತ್ತು ಕಟ್ಟಕಡೆಯಲ್ಲಿರುವ ಅತೀ ಕಡಿಮೆ ಸಂಪನ್ಮೂಲವನ್ನು ಆಶಿಸುತ್ತಿರುವ ಪುದುಚ್ಚೇರಿಗಳೂ ಈ ವಿವಾದದ ಭಾಗಿಗಳಾಗಿದ್ದಾವೆ. ಯಾವುದೇ ನ್ಯಾಯಯುತ ಹಂಚಿಕೆಯ ಯೋಜನೆ ಈ ನಾಲ್ಕೂ ರಾಜ್ಯಗಳ ನ್ಯಾಯಸಮ್ಮತವಾದ ಆಸಕ್ತಿಗಳನ್ನು ಮೈಗೂಡಿಸಿಕೊಂಡಿರಬೇಕು. ಆದರೆ ದುರಾದೃಷ್ಟವಶಾತ್, ರಾಜಕೀಯ ಕಾರಣಗಳಿಂದಾಗಿ ಎರಡೂ ಮುಖ್ಯ ರಾಜ್ಯಗಳು ಈ ಬಗ್ಗೆ ವರ್ಷಾನುಗಟ್ಟಲೆಯಿಂದ ತೀವ್ರ ನಿಲುವುಗಳನ್ನು ತೆಗೆದುಕೊಳ್ಳುತ್ತಾ ಜನತೆಯ, ನಾಡಿನ ಅಸ್ಮಿತೆಯ ಭಾವನೆಗಳೊಂದಿಗೆ ಈ ವಿಷಯವನ್ನು ಬೆಸೆದಿಟ್ಟಿದ್ದಾರಾದ್ದರಿಂದ, ಈ ರಾಜ್ಯಗಳು ಕಾವೇರಿಯ ವಿಷಯದಲ್ಲಿ ಯಾವುದೇ ರಿಯಾಯಿತಿಯನ್ನು ತೋರಿಸುವುದಕ್ಕೆ ಆಸ್ಪದವೇ ಇಲ್ಲದಂತೆ ಮಾಡಿಕೊಂಡುಬಿಟ್ಟಿದ್ದಾವೆ. ಎರಡೂ ರಾಜ್ಯಗಳಲ್ಲಿ ಕಾವೇರಿಯ ಪ್ರಸ್ತಾಪವೇ ತೀವ್ರ ಪ್ರತಿಕ್ರಿಯೆಯನ್ನು ಉಂಟುಮಾಡುವ ಪರಿಸ್ಥಿತಿಗೆ ಬಂದುಬಿಟ್ಟಿವೆ. ಈ ವಿವಾದ ಈಗಾಗಲೇ ಚುನಾವಣೆಯ ಸಮಯದಲ್ಲಿ ಉಪಯೋಗಿಸಲ್ಪಡುವ ವಿಷಯವಾಗಿಬಿಟ್ಟಿದೆ - ಅಥವಾ ರಾಜಕಾರಣಿಗಳು ಇದನ್ನು ಅಂಥಾ ವಿಷಯವನ್ನಾಗಿಸಿಬಿಟ್ಟಿದ್ದಾರೆ. ಎರಡೂ ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಈ ಬಗ್ಗೆ ತೀವ್ರ ನಿಲುವುಗಳನ್ನು ತೆಗೆದುಕೊಂಡುಬಿಟ್ಟಿರುವುದರಿಂದ ಅಧಿಕಾರಕ್ಕೆ ಬಂದ ಯಾವುದೇ ಪಕ್ಷ ತುಸುವಾದರೂ ಸಡಿಲಗೊಂಡರೆ - ಅದು ಆ ಸರಕಾರದ ವೈಫಲ್ಯ ಮತ್ತು ರಾಜ್ಯದ ಆಸಕ್ತಿಗಳನ್ನು ಒತ್ತೆಯಿಟ್ಟಂತೆ ತೋರುವುದರಿಂದ, ಈ ವಿಷಯ ಇನ್ನಷ್ಟು ಜಟಿಲವೂ, ಇತ್ಯರ್ಥ ಮಾಡಲು ಅಸಾಧ್ಯವೂ ಆಗುವ ಮಟ್ಟಕ್ಕೆ ಬಂದುಬಿಟ್ಟಿದೆ.
 

ಆಯೋಗದ ಅಂತಿಮ ತೀರ್ಪು ಬರುವುದು ತಡವಾಗಬಹುದಾದ ಕಾರಣ ತನ್ನ ರಾಜ್ಯದಲ್ಲಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಪೂರೈಕೆಯ ಬಗ್ಗೆ ಸ್ವಲ್ಪವಾದರೂ ಭರವಸೆ ಬೇಕು ಎನ್ನುವ ತಮಿಳುನಾಡಿನ ಮನವಿಗೆ ಉತ್ತರವಾಗಿ ೧೯೯೧ರ ಮಧ್ಯಂತರ ಆದೇಶವನ್ನು ಆಯೋಗ ನೀಡಿತು. ಈ ಮಧ್ಯಂತರ ಆದೇಶದ ಪ್ರಕಾರ ಕರ್ನಾಟಕ ಪ್ರತಿವರ್ಷ ೨೦೫ ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡಿಗೆ [ಅದರಲ್ಲಿ ೬ ಟಿಎಂಸಿ ಅಡಿ ನೀರು ಪುದುಚ್ಚೇರಿಗಾಗಿ ಕಾದಿರಿಸಲಾಗಿತ್ತು] ಬಿಡಬೇಕೆಂದು ಆದೇಶ ನೀಡಿತು; ಪ್ರತಿತಿಂಗಳೂ ಎಷ್ಟು ನೀರು ಬಿಡಬೇಕೆಂಬ ವಿವರವಾದ ವೇಳಾಪಟ್ಟಿಯನ್ನೂ ಆ ಆದೇಶದಲ್ಲಿ ನೀಡಲಾಗಿತ್ತು.
 

ಅಂತಿಮ ತೀರ್ಪು ನಮೂದಾಗುತ್ತಿದ್ದಂತೆಯೇ ಮಧ್ಯಂತರ ತೀರ್ಪು ರದ್ದಾಗುವುದರಿಂದ, ಇಲ್ಲಿ ಮಧ್ಯಂತರ ಆದೇಶದ ಪೂರ್ವೇತಿಹಾಸಗಳನ್ನು ಚರ್ಚಿಸುವ ಅವಶ್ಯಕತೆಯಿಲ್ಲ. ಆದರೆ ಆ ತೀರ್ಪಿನ ಬಗೆಗಿನ ಮೂರು ಅಂಶಗಳನ್ನು ಇಲ್ಲಿ ಚರ್ಚಿಸುವುದು ಅವಶ್ಯ. ಮೊದಲನೆಯದೆಂದರೆ - ಮುಂಚಿನಿಂದಲೂ ಈ ಮಧ್ಯಂತರ ತೀರ್ಪನ್ನು ಅಮಲುಗೊಳಿಸುವಲ್ಲಿ ಕರ್ನಾಟಕಕ್ಕೆ ಒಲವಿರಲಿಲ್ಲ ಅನ್ನುವುದು. ಎಷ್ಟರಮಟ್ಟಿಗೆ ಈ ರೀತಿಯ ನಿಲುವು ಕರ್ನಾಟಕದ್ದಾಗಿತ್ತೆಂದರೆ ಈ ತೀರ್ಪನ್ನು ಒಂದು ಸುಗ್ರೀವಾಜ್ಞೆಯ ಮೂಲಕ ಅಸಿಂಧುಗೊಳಿಸಲು ಪ್ರಯತ್ನಿಸಿತ್ತು. [ರಾಷ್ಟ್ರಪತಿಗಳ ಅಭಿಪ್ರಾಯಕೋರಿಕೆಯ ಮೇರೆಗೆ ಈ ಸುಗ್ರೀವಾಜ್ಞೆ ಸಂವಿಧಾನಬದ್ಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿತ್ತು]. ಮುಂದಿನ ಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ಕರ್ನಾಟಕ ಉಲ್ಲಂಘಿಸಿ ನ್ಯಾಯಾಲಕ್ಕೆ ಅಗೌರವ ಸಲ್ಲಿಸಿದ ಪ್ರಕರಣವನ್ನೂ ಕರ್ನಾಟಕ ಎದುರಿಸಬೇಕಾಯಿತು. ಎರಡನೆಯದಾಗಿ ಮಧ್ಯಂತರ ತೀರ್ಪು ಕರ್ನಾಟಕದಲ್ಲಿ ಅತೀವ ಆಕ್ರೋಶವನ್ನೂ ಜನಾಗ್ರಹವನ್ನೂ ಉಂಟುಮಾಡಿತು [ಭಾಗಶಃ ಇದನ್ನುಂಟುಮಾಡಲು ಕೆಲ ಶಕ್ತಿಗಳು ಹುನ್ನಾರ ಹೂಡಿದ್ದವೆನ್ನಬಹುದು]. ಈ ಆಕ್ರೋಶ ದುರಂತಮಯ ಹಿಂಸಾಚಾರದತ್ತ ತಿರುಗಿ, ತಮಿಳರ ಮತ್ತು ಕನ್ನಡಿಗರ ನಡುನಿನ ಸಂಬಂಧಗಳನ್ನು ಜಟಿಲಗೊಳಿಸಿತು. ಆ ವಿಪರೀತ ಭಾವ ಕೆಲಕಾಲದ ನಂತರ ತಣ್ಣಗಾಗಿ, ಒಂದು ನಾಜೂಕಾದ ಶಾಂತಿ ನೆಲೆಸಿತ್ತಾದರೂ, ಈಗ ಬಂದಿರುವ ಅಂತಿಮ ತೀರ್ಪು ಹಿಂದಿನದೇ ರೀತಿಯಾದ ಕೋಪ-ರೋಷಗಳನ್ನು ಉಂಟುಮಾಡಿದೆ. ಸದ್ಯಕ್ಕೆ ಈ ನಿಟ್ಟಿನಲ್ಲಿ ಯಾವುದೇ ಹಿಂಸಾಚಾರ ಇನ್ನೂ ನಡೆದಿಲ್ಲ ಅನ್ನುವುದೇ ಸಮಾಧಾನದ ವಿಷಯ. ಈ ಬಗ್ಗೆ ನಾವು ನಂತರ ಚರ್ಚಿಸೋಣ. ಮೂರನೆಯ ಅಂಶವನ್ನು ನಾವು ಈಗ ಕೈಗೆತ್ತಿಕೊಳ್ಳೋಣ. ೧೯೯೦ರಲ್ಲಿ ನಿಂತ ಪೈರನ್ನು ಉಳಿಸಲು ನೀರನ್ನು ಬಿಡಬೇಕೆಂಬ, ಮಧ್ಯಂತರ ತೀರ್ಪನ್ನು ಅನುಷ್ಠಾನಗೊಳಿಸುವ ವಿಷಯ ಮತ್ತೆ ಮತ್ತೆ ಸರ್ವೋಚ್ಚ ನ್ಯಾಯಾಲಯದ ಎದುರು ಬಂದಿತು. ಆ ಆಸಕ್ತಿಕರ ಕಥೆಯನ್ನು ಒಂದು ಕ್ಷಣಕ್ಕೆ ಬಿಡೋಣ. ಆದರೆ ಈ ಬಿಕ್ಕಟ್ಟನ್ನು ಬಗೆಹರಿಸಲು ಕಾವೇರಿ ನದಿ ಪ್ರಾಧಿಕರಣ ಎಂಬ ಒಂದು ಏರ್ಪಾಟನ್ನು ಆಗ ಮಾಡಲಾಯಿತು. ಅದರಿಂದೇನೂ ಉಪಯೋಗವಾಗಲಿಲ್ಲ ಎನ್ನಬೇಕು. ಏನಾದರಾಗಲೀ, ಅಂತಿಮ ತೀರ್ಪು ನಮೂದಾಗಿ ಮಧ್ಯಂತರ ತೀರ್ಪು ಇಲ್ಲದಾದಾಗ, ಆ ಏರ್ಪಾಟೂ ಇಲ್ಲವಾಗುತ್ತದೆ.
 

ಕಾವೇರಿ ಪರಿವಾರ
 

ಈ ವಿವಾದ ಪಡೆದ ಬಗೆಹರಿಯಲಾರದ ರೂಪ, ಪಕ್ಷಗಳ ಅಧಿಕಾರದ ಲೆಕ್ಕಾಚಾರದಿಂದ ಮೇಲಕ್ಕೇಳಲಾಗದ ರಾಜಕೀಯ ವ್ಯವಸ್ಥೆ, ಹಾಗೂ ೧೯೯೨ರ ಹಿಂಸಾಚಾರ - ಈ ಎಲ್ಲವೂ ಸೂಚಿಸಿದ್ದೇನೆಂದರೆ ಹೆಚ್ಚಿನ ವಿಚಾರವಿನಿಮಯದೊಂದಿಗೆ, ಅಧಿಕಾರಶಾಹಿಯ ಚೌಕಟ್ಟಿನ ಹೊರಗೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡಬೇಕು ಎಂಬ ವಿಚಾರವನ್ನು. ೧೯೯೦ರ ಪ್ರಾರಂಭದಲ್ಲಿ ಜನರ ಮಟ್ಟದಲ್ಲಿ ಹೆಚ್ಚಿನ ವಿಚಾರವಿನಿಮ ಆಗಬೇಕೆನ್ನುವ ನಿಟ್ಟಿನಲ್ಲಿದಿವಂಗತ ಎಸ್.ಗುಹನ್‍ ಅವರನ್ನೊಳಗೊಂಡಂತೆ ಅನೇಕರರು ಹಲವು ಪ್ರಯತ್ನಗಳನ್ನು ಮಾಡಿ ಜನಪರ ಸಭೆಗಳನ್ನು ಆಯೋಜಿಸಿದರು. ಮೊದಲಿಗೆ ಉತ್ಸಾಹದಿಂದ ಆರಂಭವಾದ ಪ್ರಯತ್ನ ನಂತರದ ದಿನಗಳಲ್ಲಿ ಬೀಳಾಯಿತು. ತದನಂತರ ೨೦೦೧-೦೨ರಲ್ಲಿ ರಾಜಕೀಯದ ಮಟ್ಟದಲ್ಲಿ ಕಾವೇರಿಯ ಬಗ್ಗೆ ಎರಡೂ ರಾಜ್ಯಗಳನಡುವಿನ ಭಿನ್ನಾಭಿಪ್ರಾಯ ಉತ್ತುಂಗಕ್ಕೇರಿದ್ದಾಗ ಜನರೇ ಈ ವಿಷಯದಲ್ಲಿ ಯಾವುದಾದರೂ ಒಂದು ಪರಿಹಾರದತ್ತ ಮುಂದಡಿಯಿಡಬೇಕೆಂದು ಒತ್ತಯಿಸುತ್ತಾ ಈ ಲೇಖಕ ಅನೇಕ ಬರಹಗಳನ್ನು ಬರೆದದ್ದು ಉಂಟು. ಸಾಲದ್ದಕ್ಕೆ, [ಈಗ ದಿವಂಗತರಾಗಿರುವ] ಮಾಜಿ ಮುಖ್ಯನ್ಯಾಯಾಧೀಶರಾಗಿದ್ದ ನಿಟ್ಟೂರು ಶ್ರೀನಿವಾಸರಾಯರ ಮನೆಯಲ್ಲಿ ಒಂದು ಪುಟ್ಟ ಅನೌಪಚಾರಿಕ ಸಭೆಯನ್ನೂ ಆಯೋಜಿಸಿದ್ದೆವು. ಆ ಸಭೆ ಬುದ್ಧಿಜೀವಿಗಳ ಸಭೆಯಾಗಿತ್ತು; ಆದರೆ ಆಗ ಬೇಕಾಗಿದ್ದದ್ದು ರೈತರನ್ನೊಳಗೊಂಡ ಸಭೆ. ಗುಹನ್ ಅವರ ಆಲೋಚನಾಲಹರಿಯನ್ನು ಅಂತರ್ಗತಮಾಡಿಕೊಂಡಿದ್ದ ಮದ್ರಾಸು ವಿಕಾಸಾಧ್ಯಯನ ಸಂಸ್ಥೆ [ಎಂಐಡಿಎಸ್] ಒಳಗೂ ಇಂಥದೇ ವಿಚಾರವಿತ್ತು. ಆ ಸಂಸ್ಥೆಯ ಎಸ್.ಜನಕರಾಜನ್ [ಈ ವಿವಾದದಲ್ಲಿ ಸಿಲುಕಿದ್ದ ಮುಖ್ಯರಾಜ್ಯಗಳಾದ] ತಮಿಳುನಾಡಿನ ಮತ್ತು ಕರ್ನಾಟಕದ ರೈತರನ್ನು ಒಂದೆಡೆ ಸೇರಿಸುವ ಕೆಲಸವನ್ನು ಮಾಡಿದರು. ಇದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಹಾಗಾಯಿತು. ಮೊದಲ ಸಭೆಗೆ ಎರಡೂ ರಾಜ್ಯಗಳಿಂದ ಸುಮಾರು ೧೦೦ ಜನ ರೈತರು [ಏಪ್ರಿಲ್ ೨೦೦೩, ಚೆನ್ನೈ], ಕೆಲ ಬುದ್ಧಿಜೀವಿಗಳು, ಎಂಜಿನಿಯರುಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪತ್ರಕರ್ತರು ಬಂದಿದ್ದರು. ಈ ಸಭೆಯು ಸ್ನೇಹಭಾವದಿಂದ ಕೂಡಿದ್ದು ಕಾವೇರಿ ಪರಿವಾರದ ಪರಿಕಲ್ಪನೆಯ ಉದ್ಭವವಾಯಿತು. ಒಟ್ಟಾರೆ, ಕಾವೇರಿ ಪರಿವಾರದ ರೈತರು ಸ್ನೇಹಭಾವದಿಂದ, ಪರಸ್ಪರ ಸಹಕಾರದಿಂದ, ಸಂದರ್ಭಕ್ಕೆ ತಕ್ಕಂತೆ ಬೇಕಾದ ಎಡ್ಜಸ್ಟ್‌ಮೆಂಟ್ ಮಾಡಿಕೊಳ್ಳುತ್ತಾ ಮುಂದುವರೆಯಬೇಕೆಂಬ ಮಾತಾಯಿತು. ಆನಂತರ ಇದೇ ಭಾವನೆ ಮುಂದುವರೆಯುತ್ತಾ ಬಂದಿದೆ. ಇಬ್ಬದಿಯ ರೈತರು ತಮ್ಮ ನೆರೆರಾಜ್ಯಕ್ಕೆ ಭೇಟಿಯಿತ್ತು ಅಲ್ಲಿನ ದುಃಖ ದುಮ್ಮಾನಗಳನ್ನು ಅರ್ಥಮಾಡಿಕೊಳ್ಳುವ ಯತ್ನ ಮಾಡಿದ್ದಾರೆ. ಇಬ್ಬದಿಯಲ್ಲಿರುವ ಅನುಮಾನಗಳನ್ನು ಪೂರ್ತಿಯಾಗಲ್ಲದಿದ್ದರೂ ಬಹಳಮಟ್ಟಿಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ ಕೆಲಸಮಾಡಿದೆ. ಕೊರತೆಯ ಪರಿಸ್ಥಿತಿಯಲ್ಲಿ ನೀರನ್ನು ಹಂಚಿಕೊಳ್ಳುವ ಬಗೆಗೆ ಈ ಪ್ರಕ್ರಿಯೆಯಿಂದ ಪರಿಹಾರ ದೊರೆಯಲಿಲ್ಲವಾದರೂ, ಒಂದು ಪರಿವಾರಭಾವ, ಪರಸ್ಪರ ನಂಬಿಕೆ ಮತ್ತು ಉತ್ತಮ ಸಂಬಂಧಗಳನ್ನು ಎರಡೂ ರಾಜ್ಯಗಳ ಜನರ ನಡುವೆ ಏರ್ಪಾಟಾದದ್ದು ಗಮನಾರ್ಹವಾದ ವಿಷಯ. ಇದು ಒಂದು ದೊಡ್ಡ ಸಾಧನೆ ಎನ್ನಬಹುದಾದರೂ, ಈ ಪರಿವಾರ ಅಂತಿಮ ತೀರ್ಪಿನಿಂದ ಉಂಟಾಗಿರುವ ಪ್ರತಿಕ್ರಿಯೆಗಳ ಭಾವನೆಗಳ ಪೆಟ್ಟನ್ನು ತಡೆದು ಮುಂದಕ್ಕೂ ತನ್ನ ಸಕಾರಾತ್ಮಕವಾದ ಭೂಮಿಕೆಯನ್ನು ನಿರ್ವಹಿಸುತ್ತದೆಂದು ನಾವೆಲ್ಲರೂ ಆಶಿಸಬೇಕಾಗಿದೆ.
 

ಅಂತಿಮ ತೀರ್ಪು
 

ಆಯೋಗ ೫೦ ಪ್ರತಿಶತ ವಿಶ್ವಸನೀಯತೆ [ಇದೇನೆಂದು ಮುಂದೆ ವಿವರಿಸಲಾಗುವುದು] ಯ ಆಧಾರವಾಗಿ ೭೪೦ ಟಿಎಂಸಿ ಅಡಿಯಷ್ಟು ನೀರಿನ ಲಭ್ಯತೆಯಿರುತ್ತದೆ ಅನ್ನುವ ತಳಹದಿಯ ಮೇಲೆ ತನ್ನ ಅಂತಿಮ ತೀರ್ಪನ್ನು ನೀಡಿದೆ. ಈ ನೀರನ್ನು ತಮಿಳುನಾಡಿಗೆ ೪೧೯, ಕರ್ನಾಟಕಕ್ಕೆ ೨೭೦, ಕೇರಳಕ್ಕೆ ೩೦ ಮತ್ತು ಪುದುಚ್ಚೇರಿಗೆ ೭ ಟಿಎಂಸಿ ಅಡಿ ನೀರನ್ನು ನೀಡಿದೆ. ಇನ್ನು ಮಿಕ್ಕದ್ದು ೧೪ಟಿಎಂಸಿ ಅಡಿ ನೀರು. ಅದರಲ್ಲಿ ೧೦ ಟಿಎಂಸಿ ಅಡಿಯನ್ನು ಪರಿಸರದ ಕಾರಣಕ್ಕೆ, ಮತ್ತು ಮಿಕ್ಕ ೪ ಸಮುದ್ರಕ್ಕೆ ಅನಿವಾರ್ಯವಾಗಿ ಹರಿದುಬಿಡುವ ನೀರೆಂದೂ ಪರಿಗಣಿಸಲಾಗಿದೆ. ಕರ್ನಾಟಕ ಬಿಳಿಗುಂಡ್ಲುವಿನಿಂದ ೧೯೨ ಟಿಎಂಸಿ ಅಡಿ ನೀರನ್ನು ಬಿಟ್ಟುಕೊಡಬೇಕು. ಅದರಲ್ಲಿ ೧೦ ಟಿಎಂಸಿ ಅಡಿ ಪರಿಸರಕ್ಕಾಗಿ ಮೀಸಲಾಗಿಡಲಾಗಿದೆ. ಅಂದರೆ ೧೮೨ ಟಿಎಂಸಿ ಅಡಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವುದು. ಈ ನೀರಿನೊಂದಿಗೆ ಬಿಳಿಗುಂಡ್ಲು ಮತ್ತು ಮೆಟ್ಟೂರಿನ ನಡುವೆ ಲಭ್ಯವಾಗುವ ೨೫ ಟಿಎಂಸಿ ಅಡಿ ನೀರನ್ನು ಸೇರಿಸಿದರೆ ಒಟ್ಟಾರೆ ಮೆಟ್ಟೂರಿನಲ್ಲಿ ೨೦೭ ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. [ತಮಿಳುನಾಡಿಗೆ ನೀಡಿರುವ ೪೧೯ ಟಿಎಂಸಿ ಅಡಿ ನೀರಿಗೂ ಇದಕ್ಕೂ ನಡುವಿನ ಅಂತರದ ನೀರು ಆ ರಾಜ್ಯದಲ್ಲೇ ಲಭ್ಯವಾಗುತ್ತದೆ]. ಮಳೆಯ ಕೊರತೆಯಿರುವ ವರ್ಷಗಳಲ್ಲಿ ಇದೇ ಪರಿಮಾಣಗಳ ಆಧಾರದ ಮೇಲೇ ನೀರನ್ನು ಹಂಚಿಕೊಳ್ಳಬೇಕೆಂದು ಆಯೋಗ ಆದೇಶ ನೀಡಿದೆ. ಒಟ್ಟಾರೆ ಆದೇಶದಲ್ಲಿ ಇದನ್ನು ಅಮಲು ಮಾಡಲು, ತಿಂಗಳುವಾರು ನೀರಿನ ಬಿಡುಗಡೆಯ ವೇಳಾಪಟ್ಟಿಯ ಉಸ್ತುವಾರಿಗೆ ಕಾವೇರಿ ನಿರ್ವಹಣಾ ಮಂಡಲಿಯನ್ನು ಏರ್ಪಾಟು ಮಾಡಬೇಕೆಂದು ಸೂಚಿಸಲಾಗಿದೆ. ಈ ಮಂಡಲಿ ತನ್ನ ಕಮಿಟಿಗಳೊಂದಿಗೆ ಉಸ್ತುವಾರಿ ಕೆಲಸ ಮಾಡುವುದಲ್ಲದೇ ನಿಯಂತ್ರಣಾ ಪ್ರಾಧಿಕಾರವಾಗಿಯೂ ಕೆಲಸ ನಿರ್ವಹಿಸಬೇಕಾಗಿದೆ. [ಕರ್ನಾಟಕದಿಂದ ಬಿಡುಗಡೆಮಾಡಬೇಕಾದ ೧೯೨ ಟಿಎಂಸಿ ಅಡಿಯಲ್ಲಿ ೧೮೨ ಟಿಎಂಸಿ ಅಡಿ ತಮಿಳುನಾಡಿಗೂ, ೧೦ ಟಿಎಂಸಿ ಅಡಿ ಪರಿಸರಕ್ಕೂ ಲೆಕ್ಕ ಹಾಕಿದ್ದರೂ ಸಮುದ್ರಕ್ಕೆ ಅನಿವಾರ್ಯವಾಗಿ ಹರಿಯುವ ೪ ಟಿಎಂಸಿ ಅಡಿಯನ್ನು ಆಯೋಗ ಮರೆತಿದೆ. ಅದನ್ನೂ ಸೇರಿಸಿದರೆ ಕರ್ನಾಟಕದಿಂದ ಹರಿಯಬೇಕಾದ ನೀರು ೧೯೬ ಟಿಎಂಸಿ ಅಡಿ ಮಟ್ಟದಲ್ಲಿದ್ದಿರಬೇಕು].

ವಿಶ್ವಸನೀಯತೆಯ ಮಟ್ಟದ ಆಧಾರ ೫೦ ಪ್ರತಿಶತ ಇರಬೇಕೋ ಅಥವಾ ೭೫ ಪ್ರತಿಶತ ಇರಬೇಕೋ ಅನ್ನುವುದರ ಬಗ್ಗೆ ಎಂಜಿನಿಯರುಗಳಲ್ಲೇ ಭಿನ್ನಾಭಿಪ್ರಾಯವಿದೆ. ೫೦ ಪ್ರತಿಶತ [ಅಥವಾ ೭೫ ಪ್ರತಿಶತ] ವಿಶ್ವಸನೀಯತೆಯ ಹರಿವು ಅಂದರೆ ನೂರು ವರ್ಷಗಳಲ್ಲಿ ೫೦ [ಅಥವಾ ೭೫] ವರ್ಷಗಳಲ್ಲಿ ನಮೂದಿಸಿದ ಮಟ್ಟಕ್ಕೆ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚಾಗಿ ನೀರಿನ ಹರಿವು ಇರುತ್ತದೆ ಅನ್ನುವ ವಿಶ್ವಾಸ. ಈ ಮಟ್ಟ ೫೦ ಪ್ರತಿಶತವಾದರೂ ೭೫ ಪ್ರತಿಶತವಾದರೂ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಯಾವರಾಜ್ಯಕ್ಕೆ ಎಷ್ಟು ನೀರೆಂಬುದು ಯಾವುದಾದರೂ ಸಂಖ್ಯೆಯಾಧಾರದ ಮೇಲಿರಬೇಕಾದ್ದರಿಂದ ಈ ಸಂಖ್ಯಯನ್ನು ಉಪಯೋಗಿಸಲ್ಪಟ್ಟಿದೆ. [ಆದರೆ ಈ ಸಂಖ್ಯೆಗಿಂತ ಕಡಿಮೆ ಮಟ್ಟದ ನೀರು ಲಭ್ಯವಿರುವಾಗ ಯಾವರೀತಿ ಹಂಚಿಕೆಯಾಗಬೇಕೆಂಬ ನಿಯಮವಂತೂ ಇರಲೇ ಬೇಕು.]

ಆದೇಶಕ್ಕೆ ಬಂದ ಪ್ರತಿಕ್ರಿಯೆಗಳು 

ಈ ಆದೇಶದ ಬಗ್ಗೆ ಕರ್ನಾಟಕದಲ್ಲಿ ತೀವ್ರ ಅಸಮಾಧಾನ ಎಲ್ಲ ದಿಕ್ಕುಗಳಿಂದಲೂ ಬಂದಿದೆ. ಎಲ್ಲರೂ ಈ ಆದೇಶ ಅನ್ಯಾಯದ್ದು ಅನ್ನುತ್ತಿದ್ದಾರೆ. ಕೆಲವರು ಇದನ್ನು ಪೂರ್ವಾಗ್ರಹ ಪೀಡಿತ ಅಂತಲೂ ವಿವರಿಸಿದ್ದಾರೆ. ಈ ಆದೇಶವನ್ನು ತಿರಸ್ಕರಿಸುವ ಮಾತುಗಳೂ ಕೇಳಿಬಂದಿವೆ. ತಮಿಳುನಾಡಿನಲ್ಲಿ ಈ ಆದೇಶವನ್ನು ಹೆಚ್ಚಿನಷ್ಟು ಜನ ಸ್ವಾಗತಿಸಿದ್ದಾರಾದರೂ, ಕೆಲವರು ಅಪಸ್ವರ ಹಾಡಿದ್ದಾರೆ. ಮಿಕ್ಕ ಪಕ್ಷಗಳಲ್ಲದೇ, ಮೊದಲಿಗೆ ಈ ಆದೇಶವನ್ನು ಸ್ವಾಗತಿಸಿದ ದ್ರಾವಿಡ ಮುನ್ನೇಟ್ರ ಕಳಗಂ [ಡಿಎಂಕೆ] ಸರಕಾರವೂ ಆದೇಶದಲ್ಲಿ ಕೆಲವು "ಅಂಶ"ಗಳ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟೀಕರಣ ಬೇಕೆಂದು ಹೇಳಿದೆ. ಕೇರಳದಲ್ಲೂ ಆ ರಾಜ್ಯಕ್ಕೆ ನೀಡಿರುವ ನೀರಿನ ಪ್ರಮಾಣ ಕಡಿಮೆ ಅನ್ನುವ ಅಭಿಪ್ರಾಯವಿದೆ. ಪುದುಚ್ಚೇರಿಯನ್ನು ಬಿಟ್ಟು ಮಿಕ್ಕ ಎಲ್ಲ ರಾಜ್ಯಗಳೂ ಈ ತೀರ್ಪನ್ನು ಪುನರ್ವಿಮರ್ಶಿಸಲು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೆ ನೀಡಿವೆ. ಕೆಲ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿವೆ. ಈ ಎಲ್ಲ ವಿಚಾರಗಳ ಬಗ್ಗೆ ಉದ್ಭವಿಸಿರುವ ವಿಚಾರಗಳನ್ನು ಪ್ರಶ್ನೋತ್ತರದ ರೀತಿಯಲ್ಲಿ ಕೆಳಗೆ ಚರ್ಚಿಸಲಾಗಿದೆ.
 

ಪ್ರಶ್ನೆ ೧. ತೀರ್ಪನ್ನು ಸ್ವೀಕರಿಸುವ/ನಿರಾಕರಿಸುವುದಕ್ಕೆ ಆಸ್ಪದವಿದೆಯೇ?
 
ಉ. ಕಾನೂನು ಬದ್ಧವಾಗಿ ಈ ಆಯ್ಕೆ ಇಲ್ಲ. ಈ ಆದೇಶ ಕಾನೂನು ಸಂಹಿತೆಯ ಪ್ರಕಾರ - ಅಂತರರಾಜ್ಯ ಜಲವಿವಾದಗಳ ಕಾಯಿದೆ ೧೯೫೬ ಮತ್ತು ಅದಕ್ಕೆ ೧೯೯೨ರಲ್ಲಿ ಮಾಡಿದ ತಿದ್ದುಪಡಿಯನ್ವಯ - ಅಂತಿಮ ಮತ್ತು ಬದ್ಧ ತೀರ್ಪಾಗಿ ನೀಡಲಾಗಿದೆ. ಅದಕ್ಕೆ ಸರ್ವೋಚ್ಚನ್ಯಾಯಾಲಯದ ಆದೇಶದಷ್ಟೇ ಬದ್ಧತೆಯಿದೆ.


ಪ್ರಶ್ನೆ ೨. "ಪುನಃ ಪರಿಶೀಲನೆಯ ಮನವಿ" ಸಲ್ಲಿಸಲು ಆಸ್ಪದವಿದೆಯೇ? 
ಉ. ಅಂತರರಾಜ್ಯ ಜಲವಿವಾದಗಳ ಕಾಯಿದೆಯನ್ವಯ ಪುನಃ ಪರಿಶೀಲನೆಗೆ ಆಸ್ಪದವಿಲ್ಲ. ಆದರೆ, [ಆ ಕಾನೂನಿನಂತೆ] ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶದಷ್ಟೇ ಬದ್ಧತೆಯಿದೆ ಎನ್ನುವುದಾದರೆ, ಸರ್ವೋಚ್ಚನ್ಯಾಯಾಲಯಗಳ ಆದೇಶಗಳಿಗಿರುವಂತೆಯೇ ಈ ಆದೇಶಕ್ಕೂ ಪುನಃಪರಿಶೀಲನೆಯ ಸಾಧ್ಯತೆಯಿರಬಹುದು. ಅದೇನೇ ಇದ್ದರೂ ಜಲವಿವಾದಗಳ ಕಾಯಿದೆಯನ್ವಯ ಕೇಂದ್ರ ಸರಕಾರಕ್ಕಾಗಲೀ, ಆಯಾ ರಾಜ್ಯ ಸರಕಾರಗಳಿಗಾಗಲೀ ಈ ಆದೇಶದ ಯಾವುದೇ ಅಂಶದ ಬಗ್ಗೆ "ವಿವರಣೆ, ಅಥವಾ ಮೊದಲು ಆಯೋಗದ ದೃಷ್ಟಿಗೆ ಬಂದಿರದ ವಿಷಯಗಳ ಬಗೆಗೆ ಮಾರ್ಗದರ್ಶನ ಬೇಕೆನ್ನಿಸಿದರೆ" ಅದನ್ನ ಮೂರು ತಿಂಗಳುಗಳೊಳಗಾಗಿ ಆಯೋಗದ ದೃಷ್ಟಿಗೆ ತರಬಹುದಾಗಿದೆ. ಇದು ಪುನಃಪರಿಶೀಲನೆಗೆ ಕೊಟ್ಟಿರುವ ಸಾಧ್ಯತೆ ಅಲ್ಲವೆಂಬುದನ್ನು ಗಮನಿಸಬೇಕು. ಆದರೆ ರಾಜ್ಯ ಸರಕಾರಗಳನ್ನು ಈ ಪದಪ್ರಯೋಗದ ಒಳಸುಳಿಗಳು ಬಂಧಿಸಿಡುವ ಸಾಧ್ಯತೆಗಳು ಬಹಳ ಕಡಿಮೆ. ರಾಜ್ಯಸರಕಾರಗಳು ಎಲ್ಲ ರೀತಿಯ ಅನುಮಾನಗಳನ್ನೂ, ಅಸಮಾಧಾನಗಳನ್ನೂ, ಪೀಡೆಗಳನ್ನೂ ಮತ್ತೆ ಆಯೋಗಕ್ಕೆ ಮನವಿಯ ರೂಪದಲ್ಲಿ ಸಲ್ಲಿಸಿ, ವಿವರಣೆ ಯಾಚಿಸುವ ಪ್ರಕ್ರಿಯೆಯನ್ನು ಪುನಃಪರಿಶೀಲನೆಯಾಗಿ ಮಾರ್ಪಡಿಸಿಬಿಡುತ್ತವೆ. ಆಯೋಗವೂ ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ತಾಳ್ಮೆಯಿಂದ ಮರುಪರಿಶೀಲನೆ ಮಾಡಬೇಕಾಗುತ್ತದೆ. ಈ ಉತ್ತರಗಳನ್ನು ಆಯೋಗ ತ್ವರಿತಗತಿಯಲ್ಲಿ ನೀಡಿ ಈ ತೀರ್ಪನ್ನು ಕೇಂದ್ರ ಸರಕಾರ ಆ ತಕ್ಷಣ ಯಾವ ಕಾಲಹರಣವನ್ನೂ ಮಾಡದೇ ಗೆಜೆಟ್ಟಿನಲ್ಲಿ ಪ್ರಕಟಿಸುತ್ತದೆಂದು ಆಶಿಸಬೇಕಾಗಿದೆ.

ಪ್ರಶ್ನೆ ೩. ಸರ್ವೋಚ್ಚ ನ್ಯಾಯಾಲಯದ ಬಾಗಿಲುಗಳನ್ನು ತಟ್ಟುವ ಅವಕಾಶವಿದೆಯೇ? 
ಉ. ಕರಾರುವಾಕ್ಕಾಗಿ ನೋಡಿದರೆ ಇದಕ್ಕೆ ಉತ್ತರ "ಇಲ್ಲ" ಎಂದೇ ಹೇಳಬೇಕಾಗುತ್ತದೆ. ಸಂವಿಧಾನದ ೨೬೨ರ ಕಲಮಿನ ನಿಬಂಧನೆಯ ಪ್ರಕಾರ ಮತ್ತು ಜಲವಿವಾದಗಳ ಕಾಯಿದೆ ೧೯೫೬ರ ಅನ್ವಯ ವಿವಾದವನ್ನು ಆಯೋಗಕ್ಕೆ ಅರ್ಪಿಸಿದ ನಂತರ ಅದರಲ್ಲಿ ಹಸ್ತಕ್ಷೇಪ ಮಾಡಲು [ಸರ್ವೋಚ್ಚ ನ್ಯಾಯಾಲಯವನ್ನೊಳಗೊಂಡು] ಯಾವುದೇ ನ್ಯಾಯಾಲಯಕ್ಕೆ ಹಕ್ಕಿಲ್ಲ. ಅನೇಕ ವರ್ಷಗಳಿಂದ ಈ ಲೇಖಕ ಈ ರೀತಿಯಾದ - ಮರುಪರಿಶೀಲನೆಗೆ ಆಸ್ಪದವಿಲ್ಲದ ವ್ಯವಸ್ಥೆಯಿಂದ ರಾಜ್ಯಗಳಿಗೆ ಅಸಮಾಧಾನವಾಗಬಹುದೆಂಬ ವಿಚಾರವನ್ನು ಚರ್ಚಿಸಿರುವುದಿದೆ - ಈಗ ಆಗಿರುವುದೂ ಅದೇ. ಸರ್ವೋಚ್ಚ ನ್ಯಾಯಾಲಯ ಇದನ್ನು ಮರುಪರಿಶೀಲಿಸುವ ಹಕ್ಕನ್ನು ಕಾಯ್ದಿಡಬೇಕು ಎಂಬ ಸಲಹೆಯನ್ನು ಯಾರೂ ಪರಿಗಣಿಸಿಲ್ಲ. ಈಗಿನ ಕಾಯಿದೆಯನ್ವಯ [ಈ ಲೇಖಕ ಅರ್ಥೈಸಿರುವಂತೆ] ಈಗ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕೆ ಆಸ್ಪದವಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಹಾಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಅದನ್ನು ಸ್ವೀಕರಿಸಬೇಕೋ, ವಿಚಾರಣೆ ನಡೆಸಬೇಕೋ ಎನ್ನುವುದರ ಬಗ್ಗೆ ನ್ಯಾಯಾಲಯವೇ ಒಂದು ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸಂವಿಧಾನದ ೨೬೨ನೇ ಕಲಮು ಮತ್ತು ಜಲವಿವಾದಗಳ ಕಾಯಿದೆಯನ್ನು ಓದಿದಾಗ, ಇಂಥಹ ಮನವಿಯನ್ನು ಯಾವ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯ ಸ್ವೀಕರಿಸಬಹುದು ಅನ್ನುವುದು ಸ್ಪಷ್ಟವಾಗಿಲ್ಲ. ಆದರೆ ಸಂವಿಧಾನದ ಇತರ ಕಲಮುಗಳ ಅನ್ವಯ - ಕಾಯಿದೆಯಲ್ಲಿ ನ್ಯಾಯಾಲಯಕ್ಕೆ ಮರುಪರಿಶೀಲನೆಯ ಹಕ್ಕಿಗಿರುವ ಅಡ್ಡಗೋಡೆಯನ್ನು - ಸರ್ವೋಚ್ಚ ನ್ಯಾಯಾಲಯ ದಾಟಬಹುದೆಂದು ಕೆಲ ಕಾನೂನ ತಜ್ಞರ ಅಭಿಪ್ರಾಯವಾಗಿದೆ. ಈ ಬಗ್ಗೆ ಹೆಚ್ಚಿನ ಅಭಿಪ್ರಾಯವನ್ನು ನೀಡಲು ಈ ಲೇಖಕನಿಗೆ ಸಾಧ್ಯವಿಲ್ಲ.

ಪ್ರಶ್ನೆ ೪. ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಭಾವನೆಯಲ್ಲಿ ಹುರುಳಿದೆಯೇ? 
ಉ. ಈ ಭಾವನೆ ಐತಿಹಾಸಿಕ ಕಾರಣಗಳಿಗಾಗಿ ಕರ್ನಾಟಕದ ಜನತೆಯ ಮನಃಪಟಲದಲ್ಲಿ ಮನೆಮಾಡಿದೆ. ಬಹಳ ಕಾಲದಿಂದಲೂ ೧೮೯೨ರ ಮತ್ತು ೧೯೨೪ರ ಮದ್ರಾಸು ಸರಕಾರ ಮತ್ತು ಮೈಸೂರು ಸಂಸ್ಥಾನ ಗಳ ನಡುವಿನ ಒಪ್ಪಂದಗಳಲ್ಲಿ - ಮದ್ರಾಸು ಸರಕಾರ ನ್ಯಾಯಸಮ್ಮತವಲ್ಲದ ಹೇರಿಕೆಗಳನ್ನು ಸಂಸ್ಥಾನದ ಮೇಲೆ ತಳ್ಳಿದೆ ಅನ್ನುವ ಭಾವನೆ ಇದೆ. ಈ ಭಾವನೆ ಸರಿಯೋ ತಪ್ಪೋ ಗೊತ್ತಿಲ್ಲವಾದರೂ ಅದರಲ್ಲಿ ಹುರುಳಿದೆ. ೧೯೨೪ರ ಒಪ್ಪಂದ ಕೃಷ್ಣರಾಜಸಾಗರ [ಮತ್ತು ಮೆಟ್ಟೂರು] ಅಣೆಕಟ್ಟುಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿತಾದರೂ, ಅಲ್ಲಿಂದ ಮುಂದಕ್ಕೆ ಆಯಾ ರಾಜ್ಯಗಳಲ್ಲಿ ನೀರಾವರಿಯಡಿಯಲ್ಲಿ ಬರಬಹುದಾದ ಪ್ರದೇಶಗಳ ಮೇಲೆ ಪರಿಮಿತಿಗಳನ್ನೂಡ್ಡಿತ್ತು. ಈ ಪರಿಮಿತಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮಗೆ ಅನ್ಯಾಯವಾಗಿದೆ ಅನ್ನುವ ಭಾವನೆ ನೆಲೆಮಾಡಿಕೊಂಡಿದೆ. ಆದರೆ ಒಂದು ಕಾಲಕ್ಕೆ ಆ ಭಾವನೆ ಸಕಾರಣವಾಗಿದ್ದೆನಿಸಿದ್ದರೂ ಇಂದಿಗೆ ಅದರ ಪ್ರಸ್ತುತತೆ ಇಲ್ಲ. ಎರಡೂ ರಾಜ್ಯಗಳು ಒಪ್ಪಂದಕ್ಕಿಂತ ಹೆಚ್ಚಾದ ಜಮೀನನ್ನು ನೀರಾವರಿಯಡಿ ತಂದಿದ್ದಲ್ಲದೆ, ಕರ್ನಾಟಕ ಕಬಿನಿ, ಹೇಮಾವತಿಯಂತಹ ಅಣೆಕಟ್ಟುಗಳನ್ನು ನಿರ್ಮಿಸಿಬಿಟ್ಟಿತು. ಈ ಮೂಲಕ ಕರ್ನಾಟಕಕ್ಕೆ ಕಾವೇರಿಯ ನೀರಿನ ಮೇಲೆ ಹೆಚ್ಚಿನ ಹತೋಟಿ ದೊರೆತು ಮುಂಚಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಹೀಗಾಗಿ ಅಲ್ಲಿಂದ ಮುಂದಕ್ಕೆ ಕರ್ನಾಟಕಕ್ಕೆ ಬೇಗುದಿ ಪಡಲು ಯಾವ ಕಾರಣವೂ ಇಲ್ಲದಾಯಿತು. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಬಗ್ಗೆ ಶಂಕೆಯಿಂದಾಗಿ [ಸಕಾರಣವೋ ಅಲ್ಲವೋ ತಿಳಿಯದಾದರೂ] ಅತೃಪ್ತಿಗೆ ಒಳಗಾಗಿದ್ದು ತಮಿಳುನಾಡು. ಈ ಮಾತು ಚಾರಿತ್ರಿಕವಾದ ಹಿನ್ನೆಲೆಯನ್ನು ಕೊಡುವುದಕ್ಕಾಗಿ ಈ ಲೇಖಕ ಹೇಳುತ್ತಿದ್ದಾನೆಯೇ ಹೊರತು ಆ ಬಗ್ಗೆ ಯಾವ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ.
 

ವರ್ತಮಾನಕ್ಕೆ ಬಂದರೆ ತಮಿಳುನಾಡು ಮತ್ತು ಕರ್ನಾಟಕ [ಕೇರಳ ಮತ್ತು ಪುದುಚ್ಚೇರಿಯ ಬಗ್ಗೆಗೂ ಇದು ಅನ್ವಯವಾಗುತ್ತದೆ] ಆಯೋಗದ ಮುಂದೆ ತಮ್ಮ ತಗಾದೆಯನ್ನು ಒಯ್ದರು. ಎರಡೂ ರಾಜ್ಯಗಳು ಮತ್ತೊಂದಕ್ಕಿಂತ ಶಕ್ತಿಶಾಲಿಯಾಗಿ ಇರಲೂ ಇಲ್ಲ, ತಮ್ಮ ದೃಕ್ಪಥವನ್ನು ಮತ್ತೊಂದು ರಾಜ್ಯದ ಮೇಲೆ ಹೇರಿ ಒಪ್ಪಿಸಲೂ ಸಾಧ್ಯವಾಗಲಿಲ್ಲ. ಆಯೋಗ ಒಂದು ಕಾನೂನು ಬದ್ಧ ಏರ್ಪಾಟಾಗಿದ್ದು ಅದರ ಅಧಿಕಾರವನ್ನು ಸಂವಿಧಾನದ ಕಲಮಿನಡಿಯಲ್ಲಿ ಅದು ಪಡೆದಿತ್ತು. ಆಯೋಗದಲ್ಲಿ ಮೂವರು ನ್ಯಾಯಮೂರ್ತಿಗಳಿದ್ದರು [ಇವರಲ್ಲಿ ಯಾರೂ ವಿವಾದದ ಯಾವುದೇ ರಾಜ್ಯಕ್ಕೆ ಸೇರಿದವರಲ್ಲ]. ನ್ಯಾಯ ಮೂರ್ತಿಗಳು ಯಾವುದೇ ಒಂದು ರಾಜ್ಯದತ್ತ ಒಲವು ತೋರಿ ಮತ್ತೊಂದು ರಾಜ್ಯದ ವಿರುದ್ಧದ ನಿಲುವನ್ನು ತೆಗೆದುಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ. ಅಲ್ಲದೇ ನ್ಯಾಯವನ್ನೊದಗಿಸಲೆಂದೇ ಏರ್ಪಾಟಾದ ಈ ಆಯೋಗ ಅನ್ಯಾಯವೆಸಗಲು ಕಾರಣವೂ ಕಾಣಿಸುತ್ತಿಲ್ಲ. ಹೀಗಾಗಿ ಆಯೋಗ ಪೂರ್ವಾಗ್ರಹ ಪೀಡಿತವಾಗಿತ್ತು ಅನ್ನುವ ಆರೋಪವನ್ನು ಪರಿಗಣಿಸಲು ಆಗುವುದಿಲ್ಲ. ಆಯೋಗದ ಅಂತಿಮ ತೀರ್ಮಾನ ನ್ಯಾಯಸಮ್ಮತವಾದ ಮಾರ್ಗದಲ್ಲಿ, ಎಲ್ಲ ಅಂಶಗಳನ್ನೂ ಪರಿಗಣಿಸಿ ನೀಡಿರುವುದರಿಂದ - ತಕ್ಷಣಕ್ಕೆ ಇದು ಎಲ್ಲರಿಗೂ ನ್ಯಾಯವನ್ನೊದಗಿಸಿದೆ ಎನ್ನುವುದನ್ನು ಮೂಲಭೂತವಾಗಿ ಒಪ್ಪಿ ನಾವು ಮುಂದುವರೆಯಬೇಕಿದೆ. ತಗಾದೆಯ ವಾದವಿವಾದಗಳು ನಡೆದ ದೀರ್ಘಕಾಲದಲ್ಲಿ ನಾಲ್ಕೂ ರಾಜ್ಯ ಸರಕಾರಗಳು ತಮ್ಮ ವಾದವಿವಾದಗಳನ್ನು ಮಂಡಿಸಲು ಸರ್ವರೀತಿಯಾದ ಪ್ರಯತ್ನಗಳನ್ನೂ ಮಾಡಿದುವು. ಘಟಾನುಘಟಿಗಳಾದ ನಿಪುಣರನ್ನು ಸಲಹೆ ಕೇಳಿದರು, ದೊಡ್ಡ ವಕೀಲರನ್ನು ತಮ್ಮ ಪರ ವಾದ ಮಾಡಲು ನಿಲ್ಲಿಸಿದರು, ಆದಷ್ಟು ಹೆಚ್ಚು ದಸ್ತಾವೇಜುಗಳನ್ನು ಮಂಡಿಸಿದರು. ಯಾವುದೇ ರಾಜ್ಯ ತಮ್ಮ ವಾದವನ್ನು ಆಯೋಗ ಸರಿಯಾಗಿ ಕೇಳಲಿಲ್ಲ - ಅಲ್ಲಿ ಅನ್ಯಾಯವಾಗಿದೆ ಅನ್ನುವುದಕ್ಕೆ ಆಸ್ಪದವೇ ಇಲ್ಲ. ಆದರೆ ನ್ಯಾಯಮೂರ್ತಿಗಳೂ ಒಮ್ಮೊಮ್ಮೆ ತಪ್ಪು ಮಾಡಬಹುದು. ಹಾಗೆ ಮಾಡಿದರೆ ವ್ಯಾಜ್ಯ ಮಾಡುತ್ತಿರುವ ಕೆಲವರಿಗೆ ಅನ್ಯಾಯವಾದ ಭಾವನೆ ಉಂಟಾಗುವುದೂ ಸಹಜವೇ. ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಅನೇಕರ ದೃಷ್ಟಿ ನಿಜವೇ ಎಂದು ಪರಿಗಣಿಸಿದರೆ, ಆಯೋಗ ತಪ್ಪಾದ ತೀರ್ಮಾನವನ್ನು ನೀಡಿದೆ, ಅದರಿಂದ ಆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನಾವು ಪರಿಗಣಿಸಲು ಸಾಧ್ಯವಿದೆ. ಅದೇ ನಿಜವಾದಲ್ಲಿ ಅದಕ್ಕೆ ಒಂದು ಮಾರ್ಗವಂತೂ ಇದ್ದೇ ಇದೆ: ಮೊದಲೇ ಹೇಳಿದಂತೆ ಮೂರು ತಿಂಗಳುಗಳೊಳಗಾಗಿ ಈ ಅನುಮಾನಗಳನ್ನು ತಿಳಿಸುತ್ತಾ ಆಯೋಗಕ್ಕೆ ಮನವಿಪತ್ರವನ್ನು ಆ ರಾಜ್ಯ ಸಲ್ಲಿಸಬಹುದು.
 

ಪ್ರ ೫. ಕರ್ನಾಟಕದಲ್ಲಿ ನಡೆಯುತ್ತಿರುವ ನಿರಸನ ಸರಿಯೇ?
 
ಉ. ಸರ್ವೋಚ್ಚ ನ್ಯಾಯಾಲಯದ ಯಾವುದೇ ತೀರ್ಮಾನವನ್ನು ನಾವು ಟೀಕಿಸಬಹುದು. ಅದೇ ವಾದಸರಣಿಯಲ್ಲಿ ಆಯೋಗದ ಆದೇಶವನ್ನೂ ನಾವು ಟೀಕಿಸಬಹುದು. ಆದರೆ ಈ ಟೀಕೆ ಕಾನೂನಿನ ಚೌಕಟ್ಟಿನೊಳಗೆ, ಸಂವಿಧಾನಕ್ಕೆ ಮತ್ತು ಅನೇಕ ರಾಜ್ಯಗಳಿರುವ ನಮ್ಮ ರಾಷ್ಟ್ರದ ಸಂಯುಕ್ತ ತತ್ವಕ್ಕೆ ಒಳಪಟ್ಟು ಇರಬೇಕಾದದ್ದು ಅವಶ್ಯಕ. ಕರ್ನಾಟಕದಲ್ಲಿ ಆಗಿರುವ ಈಚಿನ ಕೆಲ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗುತ್ತದೆ. ಬಂದ್ ಕರೆದು ಎಲ್ಲ ಕೆಲಸಗಳನ್ನೂ ತಡೆಗಟ್ಟುವುದು, ತೀರ್ಪನ್ನು ನಿರಾಕರಿಸುವುದಕ್ಕೆ ಕರೆ ನೀಡುವುದೂ ಸಮಂಜಸ ಅನ್ನಿಸುವಂತಹ ಕ್ರಿಯಗಳಲ್ಲ. ಸತ್ಯಾಗ್ರಹ, ನಿರಶನ ಸರಿ, ಆದರೆ ಜನಜೀವನ ಅಸ್ತವ್ಯಸ್ತಗೊಳಿಸುವಂತಹದ್ದೇನನ್ನೂ ಮಾಡಬಾರದು. ಬಂದ್ ಶಾಂತಿಯುತವಾಗಿತ್ತು ಅಂದರೂ, ಅದು ಜನಜೀವನಕ್ಕೆ ಅಡ್ಡಿಯುಂಟುಮಾಡಿದ್ದರಿಂದ ಹಿಂಸಾತ್ಮಕವಾದದ್ದು. ತಮಿಳು ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ಕರೆ ನೀಡವುದು ಸರಿಯೇ? ಕರ್ನಾಟಕದ ವ್ಯಾಜ್ಯವಿರುವುದು ಆಯೋಗದ ತೀರ್ಪಿನ ಮೇಲೇ ವಿನಃ ಆಯೋಗದ ಮುಂದೆ ಕರ್ನಾಟಕದಂತೆಯೇ ಅಹವಾಲು ಅರ್ಪಿಸಿ ನಿಂತಿದ್ದ ತಮಿಳುನಾಡು ಸರಕಾರದ ಜೊತೆಗಲ್ಲ. ತಮಿಳು ಜನರ ವಿರುದ್ಧವಂತೂ ಅಲ್ಲವೇ ಅಲ್ಲ. ಆದರೆ ದುರಂತವೆಂದರೆ ಜನರನ್ನು ಈ ಬಗ್ಗೆ ಎಚ್ಚರಗೊಳಿಸುವುದಕ್ಕೆ ಬದಲಾಗಿ ನಾಯಕರು ರಾಜಕೀಯಕಾರಣಗಳಿಗಾಗಿ ತಪ್ಪುದಾರಿ ಹಿಡಿಸಿ ರೊಚ್ಚಿಗೆಬ್ಬಿಸುತ್ತಿದ್ದಾರೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಕೃಷ್ಣ ಸರ್ವೂಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಇಂತಹ ಕೆಲಸವನ್ನು ಮಾಡಿದ್ದರು. ಈಗ ಕರ್ನಾಟಕದ ಓರ್ವ ಮಂತ್ರಿ ತನ್ನ ಕಾರನ್ನು ಜನ ಮಂಡ್ಯದಲ್ಲಿ ನಿಲ್ಲಿಸಿದಾಗ ಹೊರಬಂದು ಜನರಿಗೆ ತಿಳಿಹೇಳುವುದನ್ನು ಬಿಟ್ಟು ಅವರೊಂದಿಗೇ ನಿರಶನದಲ್ಲಿ ಭಾಗಿಯಾಗಿದ್ದಾರೆ. ಆಯೋಗದ ತೀರ್ಪು "ಸಾರಾಸಗಟು ಏಕಪಕ್ಷವಾದದ್ದು, ಪೂರ್ವಾಗ್ರಹದಿಂದ ಕೂಡಿದ್ದು, ನಿರಂಕುಶವಾದದ್ದು" ಎಂದು ಬಣ್ಣಿಸಿದ ದೇಶದ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರ ಮಾತುಗಳು ಅದಕ್ಕಿಂತಲೂ ಪ್ರಶ್ನಾರ್ಹವಾದ ಕ್ರಿಯೆ ಎನ್ನಬಹುದು. ಹೀಗೆ ಬಿದ್ದಬೆಂಕಿಯನ್ನು ನಂದಿಸುವುದಕ್ಕೆ ಬದಲು ಅದಕ್ಕೆ ಇನ್ನಷ್ಟು ತುಪ್ಪ ಸುರಿದು "ಪಾಕೃತಿಕ ಸಂಪನ್ಮೂಲಗಳ ಜೊತೆಗೆ ರಾಜಕೀಯ ಮಾಡುವ ಲಕ್ಷಣಗಳು" "ದೇಶದ ಐಕ್ಯತೆ" ಗೆ ಒದಗಿರುವ ಅಪಾಯ, "ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸುವ ಆಯೋಗಗಳಂತಹ ಸಂಸ್ಥೆಗಳು ಕಳೆದುಕೊಳ್ಳುತ್ತಿರುವ ನಂಬಿಕೆ" ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಕಪಟ ಸೋಗಿನ ಮಾತುಗಳಲ್ಲಿರುವ ವಿಡಂಬನೆಯನ್ನು ಜನರು ಗಮನಿಸಿಯೇ ಇರುತ್ತಾರೆ. ಕಾನೂನನ್ನು ಬಲ್ಲ ಸಂವಿಧಾನವನ್ನೂ ಅರ್ಥಮಾಡಿಕೊಂಡಿರುವ ವಕೀಲರೂ ನ್ಯಾಯಾಲಯಗಳನ್ನು ಬಿಟ್ಟು ಬೀದಿಗಿಳಿದಿರುವುದು ಸೋಜಿಗದ ಮಾತೇ ಸರಿ. ಅವರುಗಳ ನಡುವಿನಲ್ಲಿನ ಹಿರಿಯರು ಯಾರೂ ಅವರಿಗೆ ತಾವು ಮಾಡುತ್ತಿರುವ ಅಸಮಂಜಸ ಕೃತ್ಯದಬಗ್ಗೆ ಬುದ್ಧಿಮಾತು ಹೇಳಲಿಲ್ಲವೇ? ಆಯೋಗದ ತೀರ್ಪಿನ ಬಗ್ಗೆ ತಮಿಳುನಾಡಿನಲ್ಲಿ ಇಷ್ಟೇ ಅಸಮಾಧಾನವಿದ್ದಿದ್ದರೆ, ಇಂಥದೇ ಕೃತ್ಯಗಳು ತಮಿಳುನಾಡಿನಲ್ಲೂ ಆಗುವ ಸಾಧ್ಯತೆ ಇತ್ತು ಎಂದು ಹೇಳುವುದರಲ್ಲಿ ಅತಿರೇಕವೇನೂ ಇಲ್ಲ. ಈಗಾಗಲೇ ಜಯಲಲಿತಾ ಕೆಲ ಜವಾಬ್ದಾರಿರಹಿತ ಮಾತುಗಳನ್ನಾಡಿಬಿಟ್ಟಿದ್ದಾರೆ.

ದೇವೇಗೌಡ ಮತ್ತು ಕರ್ನಾಟಕದ ವಕೀಲರು, ಈ ತೀರ್ಪು ಕರ್ನಾಟಕಕ್ಕೆ ಅನ್ಯಾಯ ಉಂಟುಮಾಡುತ್ತಿರುವಂಥದ್ದು ಅನ್ನುವ ನಿರ್ಧಾರಕ್ಕೆ ಯಾವ ಆಧಾರದ ಮೇಲೆ ಬಂದಿದ್ದಾರೆ? [ಈ ಪ್ರಶ್ನೆಯನ್ನು ತಮಿಳುನಾಡಿನ ಸಂದರ್ಭದಲ್ಲಿ ಜಯಲಲಿತಾರನ್ನೂ ಕೇಳಬೇಕು]. ಇವುಗಳನ್ನು ನೋಡಿದರೆ ಈ ಮಾತುಗಳೆಲ್ಲಾ ಯೋಚಿಸದೇ ಆಡಿದವು, ಅಥವಾ ಬೇರೊಬ್ಬರಿಂದ ಬಳುವಳಿಯಾಗಿ ಪಡೆದ, ಅಥವಾ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು ಅಂತ ಅನ್ನಿಸುತ್ತದೆ. ಮೊದಲಿನಿಂದಲೂ ಕರ್ನಾಟಕ ಸರಕಾರ, ಮತ್ತು ಕರ್ನಾಟಕದಲ್ಲಿನ ರಾಜಕಾರಣಿಗಳು ನ್ಯಾಯಾಂಗ ಪ್ರಕ್ರಿಯೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ನ್ಯಾಯಾಂಗದಿಂದ ಉತ್ತಮ ಫಲಿತಾಂಶ ಬರಬಹುದೆಂಬ ನಂಬಿಕೆಯೂ ಅವರಿಗಿರಲಿಲ್ಲವಾದ್ದರಿಂದ, ಆದೇಶದಲ್ಲಿ "ಅನ್ಯಾಯ"ವನ್ನು ಅವರು ನಿರೀಕ್ಷಿಸಿದ್ದರು, ಮತ್ತು ತೀರ್ಪಿನಲ್ಲಿ ಅದೇ ಅವರಿಗೆ ಕಾಣಿಸುತ್ತಿದೆ. ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ ಕಾವೇರಿ ನೀರನ್ನು ತಮ್ಮ ರಾಜ್ಯವೇ ಹೆಚ್ಚಾಗಿ ಬಳಸುತ್ತಿದ್ದ ದಿನಗಳನ್ನು ಜನ ನೆನಪುಮಾಡಿಕೊಳ್ಳುತ್ತಾರೆ; ಆ ಮಟ್ಟಕ್ಕೆ ತೀರ್ಪು ಆ ರಾಜ್ಯದ ಪರವಾಗಿ ಇಲ್ಲವಾದ್ದರಿಂದ ಅವರಿಗೂ ಇದನ್ನು ಒಪ್ಪುವುದು ಕಷ್ಟವಾಗುತ್ತದೆ. ಎರಡೂ ರಾಜ್ಯಗಳು ತಮ್ಮ ಭೂತಕಾಲಗಳನ್ನು ಬಿಟ್ಟುಕೊಡದಿದ್ದಲ್ಲಿ ಈ ಬಗ್ಗೆ ಒಂದು ವಿವೇಚನಾಶೀಲ ನಿಲುವನ್ನು ತೆಗೆದುಕೊಳ್ಳುವ ಸಾಧ್ಯತೆ ಇಲ್ಲ.

ಪ್ರ ೬. ಈ ನಾಲ್ಕೂ ರಾಜ್ಯಗಳು ಆದೇಶದಿಂದ ಚಕಿತರಾಗುವುದಕ್ಕೆ ಕಾರಣವಿದೆಯೇ? 
ಉ. ಈ ಲೇಖಕನ ಉತ್ತರ ಈ ಪ್ರಶ್ನೆಗೆ "ಇಲ್ಲ" ಎನ್ನುವುದೇ ಆಗಿದೆ. ಈ ಲೇಖಕನ ಅಸಾಂಪ್ರದಾಯಿಕ ದೃಷ್ಟಿಯಲ್ಲಿ ಈ ಸಂಖ್ಯೆಗಳಲ್ಲಿ [ಅಂದರೆ ತಮಿಳುನಾಡಿಗೆ ೪೧೯ ಟಿಎಂಸಿ ಅಡಿ, ಕರ್ನಾಟಕಕ್ಕೆ ೨೭೦, ಕೇರಳಕ್ಕೆ ೩೦, ಪುದುಚ್ಚೇರಿಗೆ ೭] ನಿಜಕ್ಕೂ ಯಾವ ಅರ್ಥವೂ ಇಲ್ಲ. ಈ ಮಾತು ಆಶ್ಚರ್ಯಕರವಾಗಿರಬಹುದು, ಹೀಗಾಗಿ ಇದನ್ನು ವಿವರಿಸುವ ಅಗತ್ಯವಿದೆ.
 

ಮೊದಲಿಗೆ ನದೀಮೂಲದ ಕಡೆಗಿರುವ ರಾಜ್ಯಗಳಿಗೆ ನಿಗದಿಮಾಡಿರುವ ಸಂಖ್ಯೆಗಳು ಕಾಲ್ಪನಿಕವಾದದ್ದು. ಕೇರಳಕ್ಕೆ ಯಾರೂ ನೀರನ್ನು ಬಿಡುವುದಿಲ್ಲ: ಅದು ಆಕಾಶದಿಂದ ಸುರಿಯುತ್ತದೆ. [ಕೇರಳದಿಂದ "ಬಿಡುಗಡೆ" ಯಾಗದ ಆದರೆ ಕಬಿನಿ ನದಿಯ ಮೂಲಕ ಸಹಜವಾಗಿ ಹರಿಯುವ ನೀರನ್ನು ಬಿಟ್ಟರೆ], ಕರ್ನಾಟಕಕ್ಕೂ ಇದೇ ಮಾತು ವರ್ತಿಸುತ್ತದೆ. ಹಾಗೆಯೇ ತಮಿಳುನಾಡಿಗೆ ನಿಗದಿಮಾಡಿರುವ ಹೆಚ್ಚಿನಂಶ ನೀರು ಪ್ರಕೃತಿಯ "ದೇಣಿಗೆ". ಹೀಗಾಗಿ ನಮಗೆ ಮುಖ್ಯವಾಗುವ ಸಂಖ್ಯೆ ಅಂದರೆ ಕರ್ನಾಟಕ ತಮಿಳುನಾಡಿಗೆ "ಬಿಡ"ಬೇಕಾದ ನೀರು, ಮತ್ತು ತಮಿಳುನಾಡು ಕಾರೈಕಲ್‌ಗೆ [ಪುದುಚ್ಚೇರಿ] "ಬಿಡ"ಬೇಕಾದ ನೀರು. [ಗಮ್ಮತ್ತಿನ ಮಾತೆಂದರೆ ಸಹಜವಾಗಿ ಹರಿಯುತ್ತಿದ್ದ ನೀರನ್ನು ಮೊದಲಿಗೆ ಅಣೆಕಟ್ಟುಗಳ ಹಿಂದೆ ತಡೆಹಿಡಿಯುವುದರಿಂದ, ಈ ರಾಜ್ಯಗಳು ನೀರನ್ನು "ಬಿಡು"ವ ಅಥವಾ "ಕೊಡು"ವ ಹಕ್ಕನ್ನು ಕೈಗೂಡಿಸಿಕೊಂಡವು ಅನ್ನುವುದನ್ನು ನಾವು ಗಮನಿಸಬೇಕು.]
 

ಎರಡನೆಯದಾಗಿ ಕೇರಳ ರಾಜ್ಯ ೫ ಟಿಎಂಸಿ ಅಡಿ ನೀರನ್ನು ಮಾತ್ರ ಉಪಯೋಗಿಸುತ್ತಿದೆ ಎಂದು ೧೯೭೦ರಲ್ಲಿ ಅಂದಾಜು ಮಾಡಲಾಗಿತ್ತು. ಆಗಿನಿಂದ ನೀರಿನ ಉಪಯೋಗ ಹೆಚ್ಚಿರಬಹುದಾದರೂ ಅದಕ್ಕೆ ನಿಗದಿಮಾಡಿರುವ ೩೦ ಟಿಎಂಸಿ ಅಡಿ ನೀರನ್ನು ಆ ರಾಜ್ಯ ಉಪಯೋಗಿಸುವುದಕ್ಕೆ ಸಾಕಷ್ಟು ಕಾಲ ಹಿಡಿಯಲಿದೆ. ಹೀಗಾಗಿ ನಮಗೆ ಗೋಚರಿಸುವ ಭವಿಷ್ಯದಲ್ಲಿ ಕೇರಳ - ಮಿಕ್ಕ ರಾಜ್ಯಗಳ ಅವಶ್ಯಕತೆಗಳನ್ನು ಬಾಧಿಸದೇ ಹೇರಳವಾಗಿ ನೀರನ್ನು ಉಪಯೋಗಿಸಬಹುದೆಂದಾಯ್ತು. ೩೦ಟಿಎಂಸಿ ಅಡಿ ನೀರಿಗಿಂತ ಅಧಿಕವಾಗಿ ಬಳಸಬೇಕಾದ ಪರಿಸ್ಥಿತಿ ಮುಂದೆಂದಾದರೂ ಭವಿಷ್ಯದಲ್ಲಿ ಉಂಟಾದರೆ ಆಗ ಈ ಪರಿಮಿತಿಯನ್ನು ಪುನಹ ಪರಿಶೀಲಿಸಲು ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಅದು ಕೇಳಬಹುದು. ಅಥವಾ ಮತ್ತೂಂದು ಆಯೋಗವನ್ನು ರಚಿಸಲು ಮನವಿಮಾಡಿಕೊಳ್ಳಬಹುದು.
 

ಕರ್ನಾಟಕದ ಮಾತಿಗೆ ಬಂದರೆ ನಮಗೆ ಮುಖ್ಯವಾಗುವುದು ನಿಗದಿ ಮಾಡಿರುವ ೨೭೦ ಟಿಎಂಸಿ ಅಡಿ ನೀರಲ್ಲ. ಬದಲಿಗೆ ತಮಿಳುನಾಡಿಗೆ ಬಿಡಬೇಕಾದ ೧೯೨ ಟಿಎಂಸಿ ಅಡಿ ನೀರು. ಹೆಚ್ಚಿನ ವರ್ಷಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಸಹಜವಾಗಿ ಹರಿಯುವ ನೀರು ಇದಕ್ಕಿಂತ ಹೆಚ್ಚಾಗಿಯೇ ಇರುತ್ತದೆ. ಮಳೆ ಕಡಿಮೆ ಬಿದ್ದಾಗ ಮಾತ್ರ ಈ ಸಂಖ್ಯೆಯನ್ನು ನಿಭಾಯಿಸಲು ಕರ್ನಾಟಕಕ್ಕೆ ಕಷ್ಟವಾಗುತ್ತದೆ. ಅಂದರೆ, [ಈ ಮೊದಲು ಅಮಲಿಗೊಳಿಸುವುದಕ್ಕಷ್ಟೇ ಮಹತ್ವವೆಂದಿದ್ದ] ೧೯೨ ಟಿಎಂಸಿ ಅಡಿ ನೀರನ್ನು ಬಿಡುವುದು ಮಾಮೂಲು ವರ್ಷಗಳಲ್ಲಿ ಮಹತ್ವದ ಮಾತೇನೂ ಅಲ್ಲ. ಎಲ್ಲರನ್ನೂ ಕಾಡುತ್ತಿರುವ ಮಹತ್ವದ ಮಾತೆಂದರೆ, ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆಂಬ ವಿಷಯಕ್ಕೆ ಸಂಬಂಧಿಸಿದ್ದು. ಇಲ್ಲಿ ಆಯೋಗ ಯಾವುದೇ ಸೂತ್ರವನ್ನು ನೀಡದೇ "ಪರಿಮಾಣಕ್ಕನುಸಾರವಾಗಿ" ಎಂದಷ್ಟೇ ಹೇಳಿ ವಿವರಗಳನ್ನು ಕಾವೇರಿ ನಿರ್ವಹಣಾ ಮಂಡಲಿಗೆ ಎಲ್ಲ ಕೆಲಸವನ್ನೂ ಬಿಟ್ಟುಕೊಟ್ಟಿದೆ.


ತಕ್ಷಣಕ್ಕೆ ಮಾಡಬೇಕಾದ ಕೆಲಸವೆಂದರೆ ಕೊರತೆಯಿರುವ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವ ವಿಧಾನದ ಬಗ್ಗೆ ಒಂದು ಒಪ್ಪಂದದ ಚೌಕಟ್ಟನ್ನು ಏರ್ಪಾಟು ಮಾಡಿಕೊಳ್ಳುವುದು. [ನಾವು ಚರ್ಚಿಸಿದ ಮೇಲಿನ ಅಂಕಿ-ಸಂಖ್ಯೆಗಳೆಲ್ಲಾ ಈ ಇಂಥ ಪರಿಸ್ಥಿತಿಯಗಳಲ್ಲಿ ಮಾತ್ರ ಅರ್ಥವನ್ನು ಪಡೆಯುತ್ತವೆ]. ಕಾವೇರಿ ನಿರ್ವಹಣಾ ಪ್ರಾಧಿಕಾರದ ರಚನೆಯಾದ ಕೂಡಲೇ ಅದು ಕೈಗೆತ್ತಿಕೊಳ್ಳಬೇಕಾದ ಮೊದಲ ಕೆಲಸ ಇದಾಗಬೇಕು. ನಾವು ಆಯೋಗದ ತೀರ್ಪಿನಲ್ಲಿ ತಪ್ಪು ಕಂಡುಹಿಡಿಯಲೇ ಬೇಕು ಅನ್ನುವುದಾದರೆ ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳಲು ಒಂದು ವಿವರವಾದ ತಾಂತ್ರಿಕ ಮತ್ತು ಅಮಲುಗೊಳಿಸಲಾಗುವಂತಹ ಸೂತ್ರವನ್ನು ಅದು ನೀಡಲಿಲ್ಲ ಅನ್ನುವ ಅಂಶದ ಮೇಲೆ ಟೀಕಿಸಬಹುದು. ಆದರೆ ಅದೂ ಒಳ್ಳೆಯದೇ ಆಗಿರಬಹುದು. ಸ್ಪಷ್ಟವಾಗಿ ಬದಲಾಯಿಸಲಾಗದ ಒಂದು ನ್ಯಾಯಾಂಗದ, ಅಮಲು ಪಡಿಸಲೇಬೇಕಾದ ತೀರ್ಮಾನಕ್ಕಿಂತ ಸಮಯಕ್ಕೆ ತಕ್ಕಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆಯಾ ರಾಜ್ಯಗಳ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಬಹುದಾಗಿದೆ. 

ಈ ದೃಷ್ಟಿಯಿಂದ ನೋಡಿದರೆ ಕೋಪದ, ಹಲ್ಲು ಕಡಿಯುವ, ಎದೆ ಜಜ್ಜಿಕೊಳ್ಳುವ ಅವಶ್ಯಕತೆಯೇ ಇಲ್ಲ. ಈಗ ನಡೆಯುತ್ತಿರುವ ನಿರಶನ - ಸತ್ಯಾಗ್ರಹ ಎಲ್ಲವೂ ಅನವಶ್ಯಕ.


ಪ್ರ. ೭. ಕಡೆಗೆ ಈ ಬಿಕ್ಕಟ್ಟಿನ ಮೂಲ ಏನು? 
ಉ. ಪ್ರತಿ ರಾಜ್ಯವೂ ತನಗೆ ಬೇಕಾದ ನೀರಿನ ಪರಿಮಾಣವನ್ನು ನಮೂದಿಸಿವೆ. ಎಲ್ಲವನ್ನೂ ಕೂಡಿದರೆ ನದಿಯಲ್ಲಿರುವ ನೀರಿಗಿಂತ ಬೇಕೆನ್ನಲಾದ ನೀರಿನ ಪರಿಮಾಣ ಹೆಚ್ಚಾಗಿದೆ. ಹೀಗಾಗಿ ಈ ಬಿಕ್ಕಟ್ಟು. ಆದರೆ ಎಲ್ಲ ರಾಜ್ಯಗಳಿಗೂ ಇಷ್ಟು ನೀರು ಬೇಕೇ ಬೇಕೆ? ಭವಿಷ್ಯದ ಅಗತ್ಯಗಳನ್ನು ಈಗಿನ ಬಳಕೆಯ ಆಧಾರದ ಮೇಲೆ [ತುಸು ಪರಿಷ್ಕಾರಗಳೊಂದಿಗೆ] ಕಲ್ಪಿಸಲಾಗಿದೆ. ಆದರೆ ಬಹುಮಟ್ಟಿಗೆ ತಿಳಿದಿರುವ ವಿಷಯವೆಂದರೆ ಕೃಷಿ - ಮತ್ತು ಇತರ ಉಪಯೋಗಗಳಿಗೆ ಈಗಿನ ನೀರಿನ ಬಳಕೆಯ ವಿಧಾನ ಸಮರ್ಪಕವಾದದ್ದೂ ಅಲ್ಲ, ಗಿಟ್ಟುವ ಮಾತೂ ಅಲ್ಲ. ಈಗಿನ ನಮ್ಮ ವಿಧಾನದಲ್ಲಿ ಬಹಳಷ್ಟು ನೀರನ್ನು ನಾವು ಪೋಲು ಮಾಡುತ್ತಿದ್ದೇವೆ. ಈ ಬಗ್ಗೆ ಅನೇಕ ಬುದ್ಧಿಜೀವಿಗಳು, ಆಯೋಗಗಳೂ ಟಿಪ್ಪಣಿಗಳನ್ನು ಮಾಡಿವೆ. ನೀರನ್ನು ಸಮರ್ಪಕವಾಗಿ ಉಪಯೋಗಿಸಬೇಕೆನ್ನುವ ವಿವೇಕ ನಮಗೆ ಬರದೇ ಇದ್ದಲ್ಲಿ, ಈ ಬಿಕ್ಕಟ್ಟುಗಳನ್ನು ತಡೆಗಟ್ಟುವ ಅಥವಾ ಪರಿಹರಿಸುವ ಯಾವುದೇ ಆಶಾಭಾವವನ್ನು ನಾವು ಹೊಂದಲು ಸಾಧ್ಯವೇ ಇಲ್ಲ.

No comments:

Post a Comment