Showing posts with label ಶ್ರೀರಾಮ್. Show all posts
Showing posts with label ಶ್ರೀರಾಮ್. Show all posts

Monday, September 7, 2009

ಸೆಪ್ಟೆಂಬರ್ ೫ ರ ವಿಚಾರಗಳು

"When I was a boy of 14, my father
was so ignorant I could hardly stand to
have the old man around. But when
I got to be 21, I was astonished at how
much the old man had learned in
seven years."
Mark Twain


ಸುಮಾರು ಹದಿನೈದು ವರ್ಷಕಾಲ ಮೇಷ್ಟರ ಕೆಲಸ ಮಾಡಿದಾಗ ಸಹಜವಾಗಿಯೇ ಒಂದು ಸೀನಿಯಾರಿಟಿ ಬಂದುಬಿಡುತ್ತದೆ. ಜೊತೆಗೆ "ನಾನು ಮೇಷ್ಟರ ಕೆಲಸ ಪ್ರಾರಂಭಮಾಡಿದಾಗ ವಿದ್ಯಾರ್ಥಿಗಳು ಎಷ್ಟು ಮರ್ಯಾದೆಯಿಂದ ಇದ್ದರು.. ಈಗ ಕಾಲ ಬದಲಾಗಿದೆ" ಎಂದು ಕರುಬುವ ಪರಿಸ್ಥಿತಿ ಉಂಟಾಗಿದ್ದರೆ ಆ ಮೇಷ್ಟರಿಗೆ ಮಧ್ಯವಯಸ್ಸು ದಾಟುತ್ತಿದೆ ಅನ್ನುವುದು ಖಾತರಿ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ ಅವರ ಗುರುಗಳಿಗೂ ಇರುವ ಸಂಬಂಧ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಅನ್ನುವುದು ಎಷ್ಟು ನಿಜವೋ ವ್ಯಕ್ತಿಯ ಸಮಯ, ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ ಅನ್ನುವುದೂ ಅಷ್ಟೇ ನಿಜ. ಆದರೂ ನಾವುಗಳು "ಇಂದಿನ ವಿದ್ಯಾರ್ಥಿಗಳೇ ಬೇರೆ" ಎಂದು ಕರುಬುವುದನ್ನು ನಮ್ಮ ಭವ್ಯ ಚರಿತ್ರೆಯಲ್ಲಿ ಬದುಕುವುದನ್ನೂ ಬಿಡುವುದಿಲ್ಲ.

ಕಳೆದ ಹದಿನೈದು ವರ್ಷಗಳನ್ನು ತೆಗೆದು ಉನ್ನತ ವಿದ್ಯಾ ಸಂಸ್ಥೆಗಳಾದ ಇರ್ಮಾ ಅಥವಾ ಐಐಎಂಗಳಲ್ಲಿ ಗುರು-ಶಿಷ್ಯರ ಸಂಬಂಧಗಳು ಹೇಗೆ ಬದಲಾಗಿವೆ ಎನ್ನುವ ನನ್ನ ಖಾಸಗೀ ಯಾತ್ರೆಯನ್ನು ಅವಲೋಕಿಸಿದಾಗ ಕಾಣುವ ಬದಲಾವಣೆಗಳು, ಹಾಗೂ ನಾನು ಇದೇ ರೀತಿಯ ಉನ್ನತ ವ್ಯಾಸಂಗ ಮಾಡುತಿದ್ದಾಗ ಇದ್ದ ನನ್ನ ಗುರುಗಳೊಂದಿಗಿನ ಸಂಬಂಧಗಳ ಪರಿ ಮೂಲಭೂತವಾಗಿ ಬದಲಾಗಿದೆ. ಆದರೆ ಅದು ಪತನದ ದಾರಿ ಹಿಡಿದಿದೆ ಎಂದು ಹೇಳಲು ನಾನು ತಯಾರಿಲ್ಲ.

ನಮ್ಮ ಜೀವನದಲ್ಲಿ ಕಳೆದ ಮೂರು ದಶಕಗಳಲ್ಲಿ ಆಗಿರುವ ಮೂಲಭೂತ ಬದಲಾವಣೆಯ ಹಿನ್ನೆಲೆಯಲ್ಲಿ ಈ ಸಂಬಂಧಗಳನ್ನು ನಾವು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಹಾಗೂ ನಾನು ಕಲಿಸುವ ಐಐಎಂನಂತಹ ಸಂಸ್ಥೆಯ ಬೋಧನಾಪದ್ಧತಿಯ ಹಿನ್ನೆಲೆಯನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿನ ಬೋಧನಾ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಪೂರ್ಣಾವಧಿ ಕ್ಯಾಂಪಸ್ಸಿನಲ್ಲಿರುವುದೂ ಹಾಗೂ ತರಗತಿಯ ಆಚೆಯೂ ಕಲಿಕೆಯ ಪ್ರಕ್ರಿಯೆಯಿರುವ ಭಿನ್ನತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬರುತ್ತಾರೆ, ಹಾಗೂ ಅವರೆಲ್ಲ ಸಾಕಷ್ಟು ಜೀವನವನ್ನು ಕಂಡವರಾಗಿರುತ್ತಾರೆ ಅನ್ನುವುದನ್ನೂ ನಾವು ನನಪಿಟ್ಟುಕೊಳ್ಳಬೇಕಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನನ್ನ ಬೋಧಕರೊಂದಿಗೆ ನನಗಿದ್ದ ಸಂಬಂಧ ಹಾಗೂ ನನ್ನ ವಿದ್ಯಾರ್ಥಿಗಳೊಂದಿಗೆ ಕಾಲಾಂತರದಲ್ಲಿ ಬದಲಾಗುತ್ತಿರುವ ಸಂಬಂಧಗಳನ್ನು ಅವಲೋಕಿಸುತ್ತೇನೆ.

ಊಹಿಸಿಕೊಳ್ಳಿ:
- ಒಂದು ಎಸ್.ಟಿ.ಡಿ ಫೋನ್ ಮಾಡಲು ಹಾಸ್ಟೆಲ್ಲಿನಿಂದ ಒಂದು ಕಿಲೋಮೀಟರ್ ದೂರ [ಟೆಲಿಗ್ರಾಂ ಕೊಡಲು ಸಾಧ್ಯವಿರುವ] ಹೆಡ್ ಪೋಸ್ಟಾಫೀಸಿಗೆ ಹೋಗಬೇಕು. ರಾತ್ರೆ ಹನ್ನೊಂದರ ನಂತರ ಫೋನ್ ಮಾಡಿದರೆ ದಿನದ ದರದ ಕಾಲು ಭಾಗದಲ್ಲಿ ಮಾತನಾಡಬಹುದು.
- ಟೆಲಿವಿಷನ್ ಅನ್ನುವುದು ಕಪ್ಪು ಬಿಳುಪಿನ ಡಬ್ಬದಲ್ಲಿ ಬರುವ ರೈತರ ಕಾರ್ಯಕ್ರಮ. ಸಿನೇಮಾ ಅಂದರೆ ಥಿಯಟರಿಗೆ ಹೋಗಿ ನೂಕುನುಗ್ಗಲಲ್ಲಿ ಟಿಕೆಟ್ ಪಡೆದು ಬೆವರುತ್ತಾ ಪುಳಕಿತಗೊಂಡು ಬರಬೇಕು. ಅಥವಾ ೧೬ ಎಂಎಂನ ಪ್ರೊಜೆಕ್ಟರನ್ನು ಬಯಲಿನಲ್ಲಿಟ್ಟು ದೊಡ್ಡ ಪರದೆ ಕಟ್ಟಿ [ಸ್ವದೇಸ್ ಚಿತ್ರದಲ್ಲಿದ್ದಂತೆ] ನೋಡಬೇಕು.
ದೊಡ್ಡ ಮಹಾಪ್ರಬಂಧಗಳನ್ನು ಟೈಪ್ ಮಾಡಿಸಬೇಕು. ಅದನ್ನು ಬೈಂಡ್ ಮಾಡಿಸಲು ಎರಡು ದಿನದ ಕಾಲ ಸಮಯ ಬೇಕಾಗಿತ್ತು.
- ರೈಲಿನಲ್ಲಿ ದೂರದೂರಿಗೆ ಹೋಗಬೇಕಾದರೆ ಟಿಕೆಟ್ ಬುಕ್ ಮಾಡಿಸುವುದೂ ಒಂದು ದಿನದ ಕೆಲಸ. ರೈಲನ್ನು ಮಧ್ಯದಲ್ಲಿ ಬದಲಾಯಿಸಬೇಕಿದ್ದರೆ ಮುಂದಿನ ಸ್ಟೇಷನ್ನಿಗೆ ರೈಲ್ವೇ ಟೆಲಿಗ್ರಾಂ ಕೊಟ್ಟು ರಿಜರ್ವೇಷನ್ ಆಗಬಹುದೆಂದು ಪ್ರಾರ್ಥಿಸುತ್ತಾ ಇದ್ದಿರಬೇಕು.

ಜೀವನ ಹೀಗಿದ್ದಾಗ ಮನೆಗೆ ಫೋನ್ ಮಾಡುವುದೂ ದಿನಕ್ಕೆರಡು ಬಾರಿಯಲ್ಲ - ಬದಲಿಗೆ ವಾರಕ್ಕೊಮ್ಮೆ, ಅಥವಾ ಎರಡು ವಾರಕ್ಕೊಮ್ಮೆ. ಪ್ರಯಾಣಗಳೂ ಮೊದಲೇ ಯೋಚಿಸಿ ಒಂದು ವಾರದ ರಜೆಯಿದ್ದರೆ ಮಾತ್ರ ಕೈಗೊಳ್ಳುವುದಾಗಿತ್ತು. ಹೀಗಾಗಿ ಕ್ಯಾಂಪಸ್ಸಿನಲ್ಲೇ ಬಿದ್ದಿರುತ್ತಿದ್ದೆವು. ಕ್ಯಾಂಪಸ್ಸಿನಲ್ಲಿದ್ದಾಗ ನಮ್ಮ ಮೇಷ್ಟರುಗಳನ್ನೂ ನೋಡುತ್ತಲೇ ಇರುತ್ತಿದ್ದೆವು.

ಸಿನೆಮಾ ನೋಡಲು ಹೋದಾಗ ಇರುವ ನಾಲ್ಕಾರು ಥಿಯೇಟರುಗಳಲ್ಲೇ ನಮ್ಮ ಗುರುಗಳೂ ಅವರ ಸಂಸಾರವೂ ಕಾಣುವುದು ಅಸಹಜವೇನೂ ಆಗಿರಲಿಲ್ಲ. ಸಂಜೆಯ ವೇಳೆಗೆ ’ಸಚ್ ಕಾ ಸಾಮನಾ’ ಸೀರಿಯಲ್ ನೋಡಬೇಕೆಂಬ ತುರ್ತು ಯಾರಿಗೂ ಇರುತ್ತಿರಲಿಲ್ಲ. ಹೀಗಾಗಿ ನಾವುಗಳು ಸಮಯ ಕಳೆಯಲು ನಮ್ಮ ಭಾಷೆ ಬಲ್ಲ ಗುರುಗಳ ಮನೆಗೆ ಹೋಗುವುದೂ ಅಲ್ಲಿಂದ ಪುಸ್ತಕಗಳನ್ನು ಎರವಲು ಪಡೆಯುವುದೂ, ಸಾಧ್ಯವಾದರೆ ಒಳ್ಳೆಯ ಊಟ ತಿಂಡಿಗಳು ಗಿಟ್ಟುತ್ತದೆಯೇ ಎಂದು ನೋಡುವುದೂ ಒಂದು ಕಾಯಕವಾಗಿತ್ತು.

ಇಂದಿನ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಕೂತು ಎಲ್ಲಿಂದಲೋ ಡೌನ್‍ಲೋಡ್ ಮಾಡಿದ ಕಮೀನೇ ಚಿತ್ರವನ್ನು ಖರ್ಚಿಲ್ಲದೇ ನೋಡುತ್ತಾನೆ. ಅಲ್ಲೇ ಕೂತು ಡ್ಯಾಡ್ ಜೊತೆ ಮಾತನ್ನೂ ಆಡುತ್ತಾನೆ, ಆ ಮಾತುಗಳನ್ನು ಆಡುತ್ತಲೇ ಡ್ಯೂಡ್ ಜೊತೆ ಚಾಟ್ ಮಾಡುತ್ತಾನೆ. ಮೂರುದಿನದ ರಜೆ ಬಂದರೆ ಮೇಕ್ ಮೈ ಟ್ರಿಪ್ಪಿನ ಸೈಟಿಗೆ ಹೋಗಿ ಕೂಲ್ ಡೀಲ್ ಯಾವುದಾದರೂ ಇದ್ದರೆ, ಟಿಕೆಟ್ ತೆಗೆದು ಮನೆಗೂ ಹೋಗಿ ಬಂದುಬಿಡುತ್ತಾನೆ. ಹಾಗೂ ಜಗತ್ತಿನ ಯಾವುದೋ ಮೂಲೆಯಲ್ಲಿರುವ ವರ್ಚುವಲ್ ಫ್ರೆಂಡನ್ನು ಸ್ಕೈಪ್ ಮೂಲಕ ಪುಸಲಾಯಿಸುತ್ತಾನೆ.

ಜಗತ್ತು, ತಂತ್ರಜ್ಞಾನ ಮೂಲಭೂತವಾಗಿ ಬದಲಾಗಿರುವಾಗ ವಿದ್ಯಾರ್ಥಿಗಳ-ಗುರುಗಳ ಸಂಬಂಧ ಮತ್ತು ಲಾವಾದೇವಿಗಳು ಬದಲಾಗುವುದೂ ಸಹಜವೇ ಆಗಿದೆ. ನಾವುಗಳು ಕೂತು ಈ ಜನರೇಷನ್ ಬಹಳ ಬಿಗಡಾಯಿಸಿಬಿಟ್ಟಿದೆ, ಗುರುಗಳೆಂದರೆ ಅವರಿಗೆ ತುಸುವಾದರೂ ಗೌರವವಿಲ್ಲ ಎಂದು ಕರುಬುತ್ತೇವೆ ನಮ್ಮ ಜನರೇಷನ್ನಿನಲ್ಲೂ ನಾವು ಲೇವಡಿ ಮಾಡುತ್ತಿದ್ದ ಗುರುಗಳಿರುತ್ತಿದ್ದರು, ಹೆದರುವ ಗುರುಗಳಿರುತ್ತಿದ್ದರು ಮತ್ತು ಗೌರವಿಸುವ ಗುರುಗಳೂ ಇರುತ್ತಿದ್ದರು. ಆದರೂ ಈಗಿನ ಜನರೇಷನ್ನಿಗೆ ತಮ್ಮ ಗುರುಗಳನ್ನು ಕಂಡರೆ ಒಂದು ಗುಡ್ ಮಾರ್ನಿಂಗ್ ಕೂಡಾ ಹೇಳುವ ಕನಿಷ್ಠ ಮರ್ಯಾದೆಯೂ ಇಲ್ಲ ಎಂದು ಕರುಬುವವರಲ್ಲಿ ನಾನೂ ಒಬ್ಬ.

ಮೊದಲಿಗೆ ವಿದ್ಯಾರ್ಥಿಗಳ ಮೆಸ್ಸಿಗೆ ಹೋಗಿ ಅವರೊಂದಿಗೆ ಹರಟೆ ಕೊಚ್ಚಿ ಒಂದು ಸಿಗರೇಟು ಬೆಳಗಿಸಿ ಬರುತ್ತಿದ್ದೆ. ಈಗ ಅದರಲ್ಲಿ ನನಗೆ ಅರ್ಥ ಕಾಣುತ್ತಿಲ್ಲ. ಹಿಪ್ ಹಾಪ್ ಸಂಗೀತದ ಬಗ್ಗೆ ನನಗೆ ಯಾವ ಜ್ಞಾನವೂ ಇಲ್ಲದ್ದು ಅವರ ತಪ್ಪಲ್ಲ. ಅವರು ಕೇವಲ ನನ್ನ ಜೊತೆಗೆ ಅರ್ಥಾತ್ ತಮ್ಮ ಗುರುಗಳ ಜೊತೆಗೆ ಬದಲಾದ ರೀತಿಯಲ್ಲಿ ಪ್ರವರ್ತಿಸುತ್ತಿಲ್ಲ. ಅವರುಗಳು ಜಗತ್ತಿನ ಜೊತೆಗೆ ವ್ಯಾಪಾರವನ್ನು ನಡೆಸುತ್ತಿರುವ ರೀತಿಯೇ ಭಿನ್ನವಾಗಿದೆ.

ಹಾಗೆಯೇ ಬೋಧನಾ ಕ್ರಮದಲ್ಲೂ ಅನೇಕ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳಿಗೆ ಇರುವ ತಂತ್ರಜ್ಞಾನದ ಅರಿವು ಅದ್ಭುತವಾದದ್ದು. ಏನೇ ವಿಚಾರವನ್ನೂ ಗೂಗಲ್ ಮೂಲಕ ಕಂಡುಹಿಡಿದು ವಾಪಸ್ಸು ನಮ್ಮತ್ತ ಪ್ರಶ್ನೆಗಳನ್ನು ಎಸೆಯುವ ತಾಕತ್ತು ಅವರಿಗಿದೆ. ಆದರೆ ಒಂದು ಮೂಲಭೂತ ಬದಲಾವಣೆಯನ್ನು ಸಮಯ ಕಳೆದಂತೆ ನಾನು ಕಂಡಿದ್ದೇನೆ. ಅದು ನಿಜಕ್ಕೂ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದೇ ಅನ್ನುವ ನಂಬುಗೆ ನನಗಿದೆ. ಉದಾಹರಣೆಗೆ ವಿದ್ಯಾರ್ಥಿಗಳು ತಮ್ಮ ಸಂಶೋಧನಾತ್ಮಕ ಬರವಣಿಗೆಯಲ್ಲಿ ಹೆಚ್ಚಿನ ಪರಿಕರಗಳನ್ನು ವೆಬ್ ಮೂಲಕ ಪಡೆಯುತ್ತಾರೆ. ವಿಕಿಪೀಡಿಯಾವೇ ಅವರಿಗೆ ಅಂತಿಮ ಅಥಾರಿಟಿ ಆಗಿಬಿಟ್ಟಿದೆ. ಗೂಗಲ್ ದೇವರ ಕೃಪಾಕಟಾಕ್ಷದಲ್ಲಿ ಬದುಕುವ ಅವರುಗಳಿಗೆ ಲೈಬ್ರರಿಗೆ ಹೋಗಿ ಹೊಸಪುಸ್ತಕದಿಂದ ಹೊಮ್ಮುವ ಹೊಸ ಅಂಟಿನ ವಾಸನೆಯನ್ನು ಆಘ್ರಾಣಿಸಿ, ಆಸಕ್ತಿಯಿಂದ ಪುಟ ತಿರುವಿಹಾಕುವ, ಜ್ಞಾನದ ಖಜಾನೆಯನ್ನು ಹುಡುಕಿ ನಡೆವ ಸಮಯವೂ ಆಸಕ್ತಿಯೂ ಕಡಿಮೆಯಾಗುತ್ತಿರುವಂತೆ ಭಾಸವಾಗುತ್ತಿದೆ.
ಎಸ್.ಎಂ.ಎಸ್.ಜನಾಂಗದವರ ಬರವಣಿಗೆಯ ಕೌಶಲವೂ ಅಷ್ಟಕ್ಕಷ್ಟೇ. ಉನ್ನತ ವಿದ್ಯಾಸಂಸ್ಥೆಗಳಲ್ಲಿರುವ ಇವರುಗಳ ಬರವಣಿಗೆ ಚೆನ್ನಾಗಿರುತ್ತದೆಂದು ಯಾರಾದರೂ ನಂಬಿ ಬಂದರೆ, ಅವರಿಗೆ ನಿರಾಶೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಚಿಕ್ಕಂದಿನಿಂದಲೂ ಕೊಡುವ ಒಂದು ಪ್ರಶ್ನೆಗಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ್ದನ್ನು ಹೆಕ್ಕುವ ತರಬೇತಿಯೇ ಕಾರಣವೇನೋ. ಹೀಗಾಗಿ ಅವರಿಗೆ ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿರಬಹುದು, ನಾಲ್ಕಕ್ಕಿಂತ ಹೆಚ್ಚು ಆಯ್ಕೆಗಳಿರಬಹುದು ಎಂದು ವಿವರಿಸುವುದು ಸರಳವೇನೂ ಅಲ್ಲ.

ಈಗಿನ ವಿದ್ಯಾರ್ಥಿಗಳು ತಮ್ಮ ಪಾಠ್ಯಕ್ರಮದಲ್ಲಿ ಎಷ್ಟು ಮಗ್ನರಾಗಿ ಅದನ್ನು ತಮ್ಮ ಕರಗತ ಮಾಡಿಕೊಳ್ಳುವ ಉತ್ಸಾಹದಲ್ಲಿರುತ್ತಾರೆಂದರೆ ಅವರ ಸಾಮಾನ್ಯ ಜ್ಞಾನ ಮತ್ತು ಇತರ ಓದು ಕುಂಠಿತವಾಗುತ್ತಿದೆಯೇ ಎಂದೂ ನನಗೆ ಅನುಮಾನ ಬರುತ್ತದೆ. ಉದಾಹರಣೆಗೆ ಸಾಹಿತ್ಯವೆಂದಕೂಡಲೇ ಅವರಿಗೆ ನೆನಪಿಗೆ ಬರುವುದು ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಮಾತ್ರವಾದರೆ ಅದೇನೂ ಉತ್ತಮ ಶಿಕ್ಷಣ/ಲಕ್ಷಣ ಅನ್ನಿಸುವುದಿಲ್ಲ. ಇಂಥ ಸ್ಪಷ್ಟತೆಯನ್ನು ಹೊಂದಿ - ಮೀನಿನ ಕಣ್ಣಿನಮೇಲಕ್ಕೆ ಗುರಿಯಿರಿಸಿರುವ ಅರ್ಜುನರಿಗೆ ವಿಶ್ವರೂಪದರ್ಶನ ಮಾಡಿಸುವ ಕೃಷ್ಣನ ಕೆಲಸ ಸರಳವಾದ್ದೇನೂ ಅಲ್ಲ. ಆ ಒಂದು ಸವಾಲು ನಾನು ಬೋಧಿಸುತ್ತಿರುವಂತಹ ಸಂಸ್ಥೆಗಳಲ್ಲಿ ಈಗೀಗ್ಗೆ ಹೆಚ್ಚಾಗಿ ಕಾಣಿಸುತ್ತಿದೆ ಅನ್ನಬಹುದು.

ನನ್ನ ವಿದ್ಯಾರ್ಥಿಗಳನ್ನು ನಾನು ಗೆಳೆಯರನ್ನಾಗಿಸಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. [ಯಾಕೆ ಗೆಳೆಯರನ್ನಾಗಿಸಿಕೊಳ್ಳಬೇಕು ಅನ್ನುವ ಇನ್ನೂ ಗಹನವಾದ ಪ್ರಶ್ನೆ ಇನ್ನೂ ಜೋರಾಗಿ ಕಾಡಿದೆ] ನನ್ನ ಜಗತ್ತಿನಲ್ಲಿ ನಾನಿರದೇ ಅವರ ಜಗತ್ತಿಗೆ ಹಣಕಿಹಾಕಿದಾಗ ಬಹುಶಃ ನಮ್ಮ ಮಾನಸಿಕ ಲಹರಿಗಳು ಒಂದೆಡೆ ಭೇಟಿಯಾಗುವ ಸಾಧ್ಯತೆಯಿರಬಹುದು. ಮೂರು ವರ್ಷಗಳ ಹಿಂದೆ ಬ್ಲಾಗ್ ಮೂಲಕ ಬರವಣಿಗೆಯನ್ನು ಕೈಗೊಳ್ಳಬಹುದು ಅನ್ನುವುದನ್ನು ನಾನು ವಿದ್ಯಾರ್ಥಿಗಳ ಮೂಲಕವೇ ಕಂಡುಕೊಂಡೆ. ಅದರಿಂದ ನನಗೆ ಆದ ವಿದ್ಯಾರ್ಥಿಗಳೆಯರು ಹಲವರು. ಆದರ ನನ್ನ ಬರಹದ ಲೋಕಕ್ಕೆ ಬಂದ ಇತರರೂ ಅನೇಕ. ಇದೇ ಒಂದು ಭಿನ್ನ ಮಾದ್ಯಮ ಅನ್ನುವ ಮನವರಿಕೆ ನನಗಾದದ್ದು ನಾನು ನನ್ನ ವಿದ್ಯಾರ್ಥಿಗಳ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ. ಈ ಕಾಣ್ಕೆ ನನಗೆ ಕಂಡ ಕೂಡಲೇ ಅವರೊಂದಿಗೆ ಮಾತನಾಡಲು ಸಂವಹಿಸಲು ಮತ್ತೊಂದು ಮಾಧ್ಯಮ ನನಗೆ ಸಿಕ್ಕಿತು. ಬ್ಲಾಗ್ ಮೂಲಕವೂ ಮಾತನಾಡಬಹುದಿತ್ತು, ಬ್ಲಾಗ್ ಬಗ್ಗೆಯೂ ಮಾತನಾಡಬಹುದಿತ್ತು.

ಹದಿನಾರು ವರ್ಷದ ಮಗನಿರುವ ನನಗೆ ನನ್ನ ಮಗನನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುವವರೇ ನನ್ನ ವಿದ್ಯಾರ್ಥಿಗಳು. ಎಲ್.ಓ.ಎಲ್ ಎಂದರೆ ಜೋರಾಗಿ ನಗುವುದು. ಬಿಆರ್‌ಬಿ ಅಂದರೆ ಕ್ಷಣದಲ್ಲೇ ವಾಪಸ್ಸಾಗುವೆ ಅನುವುದೂ, ಆರ್ಕುಟ್, ಫೇಸ್‍ಬುಕ್ ಏನೆಂದೂ ಅರಿಯದ ನನಗೆ ಆ ಬಗ್ಗೆ ಕಲಿಸಿರುವುದೂ, ಬರೇ ರಾಜ್‍ದೂತ್ ಯಜ್ಡಿಗಳ ಬಗ್ಗೆ ಮಾತ್ರ ಅರಿವಿದ್ದ ನಮ್ಮ ಜನಾಂಗಕ್ಕೆ ಹೊಸ ಬೈಕುಗಳ ಬಗ್ಗೆ - ಹೊಸ ಮೊಬೈಲುಗಳನ್ನು ಉಪಯೋಗಿಸುವಬಗ್ಗೆ, ಹೊಸತಂತ್ರಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ನಾನು ನನ್ನ ವಿದ್ಯಾರ್ಥಿಗಳು ಕಲಿಸಿದ್ದಾರೆ. ಹೀಗಾಗಿ ಅವರ ಜೊತೆಗಿನ ಸಂಬಂಧ ಮುಂಚಿಗಿಂತ ಭಿನ್ನವಾಗಿದೆ ಅನ್ನುವುದನ್ನಷ್ಟೇ ಹೇಳಬಲ್ಲೆ - ಆದರೆ ಅವನತಿಗೊಂಡಿದೆಯೇ? ಗೊತ್ತಿಲ್ಲ.

ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಇಲ್ಲೇ ವಾಸ್ತವ್ಯವಿರಬೇಕಿರುವ ಅವಶ್ಯಕತೆಯಿದ್ದ ಹಳೆಯ ಕಾಲದ ಪಾಠಕ್ರಮವನ್ನು ನಾವು ಪಾಲಿಸುತ್ತಿರುವುದರಿಂದ ಬಹುಶಃ ಸಂಬಂಧಗಳು ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಹನ ರೀತಿ ಪತನಗೊಂಡಿದೆ ಅಂತ ಆಗಾಗ ಅನ್ನಿಸುವುದುಂಟು.

ಮೊನ್ನೆ ಏರ್‌ಪೋರ್ಟಿನಲ್ಲಿ ಸಿಕ್ಕ ಒಬ್ಬ ವಿದ್ಯಾರ್ಥಿಯನ್ನು ಮಾತನಾಡಿಸ ಹೊರಟರೆ ಅವನು ನನ್ನನ್ನು ಗುರುತೇ ಹಿಡಿಯಲಿಲ್ಲ. ನಾನು ಬೇಸರಗೊಂಡೆ. ಈಗಿನ ಕಾಲದ ವಿದ್ಯಾರ್ಥಿಗಳೇ ಹೀಗೆ ಎಂದು ಮನಸ್ಸಿನಲ್ಲೇ ಕರುಬಿದೆ. ಸ್ವಲ್ಪ ಸಮಯದ ನಂತರ ಆತ ಬಳಿಗೆ ಬಂದು "ಪ್ರೊಫೆಸರ್... ಇದು ನೀವೇನಾ?" ಎಂದು ಕೇಳಿದ. "ಅಲ್ಲಯ್ಯಾ ನಾನು ಮಾತನಾಡಿಸುವ ಪ್ರಯತ್ನ ಮಾಡಿದರೂ ಮುಖ ತಿರುಗಿಸಿಕೊಂಡು ಹೋದವನು ಈಗ ಇದ್ದಕ್ಕಿದ್ದ ಹಾಗೆ ಬಂದು ಮಾತನಾಡಿಸುತ್ತಿದ್ದೀಯಲ್ಲಾ?" ಅಂತ ಕೇಳಿದರೆ. "ನೀವು ಇಷ್ಟುದ್ದ ಕೂದಲು ಬೆಳೆಸಿದ್ದೀರಿ. ಯೂ ಹ್ಯಾವ್ ಚೇಂಜ್ಡ್.. ಯೂ ಲುಕ್ ಕೂಲ್. ನಿಮ್ಮ ಈಚಿನ ಫೋಟೊವನ್ನು ಫೇಸ್‍ಬುಕ್ ಮೇಲೆ ಹಾಕಿದ್ದರೆ ಈ ಫಜೀತಿಯೇ ಇರುತ್ತಿರಲಿಲ್ಲ" ಅಂದ. ಆತ ತನ್ನ ಕೂದಲನ್ನು ಕತ್ತರಿಸಿದ್ದ. ಚೆಡ್ಡಿಹಾಕಿ ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದವನು ಸೂಟ್ ಧರಿಸಿದ್ದ. ಕೂದಲನ್ನು ಕತ್ತರಿಸಿದ್ದ. "ಯೂ ಲುಕ್ ಹಾಟ್" ಅಂದೆ. ಅವನು ಬೆವರೊರೆಸಿಕೊಂಡ.....

ಹೀಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಸಂಬಂಧಗಳು ವಿಕಸನಗೊಳ್ಳುವ ರೀತಿ ಬದಲಾಗುತ್ತಿದೆ. ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಮಾತನಾಡಲು ಅವರನ್ನು ಅರ್ಥಮಾಡಿಕೊಂಡು ಅವರ ಅದ್ಭುತ ಜಗತ್ತಿಗೆ ಪ್ರವೇಶಿಸಬೇಕೆನ್ನುವುದನ್ನು ಅವರು ನನಗೆ ಬಾರಿಬಾರಿ ಕಲಿಸಿದ್ದಾರೆ. ನಮ್ಮ ಜಮಾನಾದಲ್ಲಿ ಟಿವಿ ಇರಲಿಲ್ಲ ಅನ್ನುವುದು ಅವರಿಗೆ ಮಹತ್ವದ ಸಂಗತಿ ಅನ್ನಿಸುವುದೇ ಇಲ್ಲ. ಹಾಗಿರುವುದೇ ಸರಿ!


Tuesday, March 31, 2009

ಹೃದ್ರೋಗಿಗಳು ಕಡಿಮೆಯಾಗುತ್ತಾರೆ



ಮಯೂರ ಕೇಳಿದ ಪ್ರಶ್ನೆಗಳು: 
  • ಬರಹಗಾರರು ನಗುವುದನ್ನು ಮರೆತಿದ್ದಾರೆಯೇ? ಅಥವಾ ಅವರು ನಗಬಾರದೇ? 
  • ಎಲ್ಲ ಸಾಹಿತ್ಯ  ಕೃತಿಗಳಲ್ಲೂ ಹಿತ್ತಲಿನಿಂದ ಹಿಮಾಲಯದವರೆಗೆ ಸಮಸ್ಯೆ ಸಮಸ್ಯೆ. ಜೀವನದ ಸಣ್ಣಪುಟ್ಟ ಖುಷಿ ಯಾಕೆ ಮುಖ್ಯವೆನ್ನಿಸುತ್ತಿಲ್ಲ?
  • ಸಾಹಿತಿಗಳು ಒಂದಾದರೂ ನಗೆ ಕೃತಿ ಬರೆಯಲೇಬೇಕು ಎಂದು ಕಡ್ಡಾಯ ಮಾಡಿದರೆ ಹೇಗೆ?
  • ನೆನಪಿಸಿಕೊಂಡಾಗೆಲ್ಲಾ ನಗುವಂಥಹ ನೀವು ಓದಿದ ಬರಹ?

ಉತ್ತರ:

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, 
ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 

ಎಲ್ಲ ಸಾಹಿತ್ಯ ಕೃತಿಗಳಲ್ಲೂ ಸಮಸ್ಯೆಗಳೇ ಅಂತ ನೀವಂದಿದ್ದೀರಿ. ಈ ಸಮಸ್ಯೆಗಳಿಂದ ಪಲಾಯನಮಾಡಲು ಈ ಟೀವಿಯವರು ನಿಮ್ಮನ್ನು ನಗಿಸಲು ಕಾಮೆಡಿ ಕಿಲಾಡಿಗಳು ಅನ್ನುವ ಕಾರ್ಯಕ್ರಮವನ್ನು ರೂಪಿಸಿದರು. ಅದನ್ನು ನೋಡಿದರೆ ಈ ಕಾರ್ಯಕ್ರಮವೇ ಒಂದು ಸಮಸ್ಯೆ ಅನ್ನುವುದು ನಿಮಗೆ ವೇದ್ಯವಾಗುತ್ತದೆ. ಹೀಗಾಗಿ ಒಮ್ಮೊಮ್ಮೆ ಪರಿಹಾರಕ್ಕಿಂತ ಸಮಸ್ಯೆಯ ಜೊತೆ ಜೀವನ ಮಾಡುವುದೇ ಒಳ್ಳೆಯದೇನೋ. 

ನಮ್ಮ ಲೇಖಕರು ತಮ್ಮ ಸಮಸ್ಯೆಗಳನ್ನು ಬರಹರೂಪಕ್ಕಿಳಿಸಿ ಹೃದಯದಿಂದ ಹೊರಹಾಕುವುದು ಒಂದು ಥರ ಒಳ್ಳೆಯದಲವೇ? ಹೀಗೆ ಹೃದ್ರೋಗಿಗಳ ಸಂಖ್ಯೆಯಾದರೂ ಕಡಿಮೆಯಾಗುತ್ತದೆ. ಅಕಸ್ಮಾತ್ ಬರಹಗಾರರು ಕಡ್ಡಾಯವಾಗಿ ಹಾಸ್ಯ ಬರೆದರೆ, ಕಾಮೆಡಿ ಕಿಲಾಡಿಗಳ ಗತಿಯೇನು?

ವ್ಯಾಲೆಂಟೈನ್ಸ್ ಡೇ ಆಚರಿಸಬಾರದೆಂದು ಕೂಗಾಡುವ ಮುತಾಲಿಕ್‍ ನಿಮಗೆ ಸಮಸ್ಯೆಯಾಗಿ ಕಾಣುತ್ತಾರೆಯೇ? ಸ್ವಲ್ಪ ಯೋಚಿಸಿ ನೋಡಿ, ಮದುವೆ ಮಾಡಿಕೊಳ್ಳದಿರುವ ಆತ ತನ್ನ ಮೇಲೆ ಇಲ್ಲದ ಜವಾಬ್ದಾರಿಯನ್ನು ಹೇರಿಕೊಂಡು ಅದನ್ನು ತನ್ನ ಸೇನೆಯ ಮೂಲಕ ಪರಿಹರಿಸುತ್ತೇನೆಂದು ಹೊರಟಿರುವುದರಲ್ಲಿ ನಿಮಗೆ ಹಾಸ್ಯ ಕಾಣುವುದಿಲ್ಲವೇ? ಆತನಿಗೆ ಪಿಂಕ್ ಚೆಡ್ಡಿ ಕಳಿಸುವ ಹೆಂಗಸರು ನಿಮಗೆ ಮಂದಹಾಸ ನೀಡಲಿಲ್ಲವೇ?

ಮುತಾಲಿಕ್‍ಗೆ ಮದುವೆ ಮಾಡಿಸುತ್ತೇನೆಂದು ಹೊರಟಿರುವ ವಾಟಾಳ್ ಕಂಡರೆ ನಮಗೆ ನಗು ಬರುವುದಿಲ್ಲವಾ?

ರೋಜಾ ಹೂವು ವ್ಯಾಪಾರ ಹೆಚ್ಚುತ್ತದಾದ್ದರಿಂದ ವ್ಯಾಲೆಂಟೈನ್ಸ್ ಡೇ ಸಮರ್ಥಿಸುತ್ತೇವೆನ್ನುವ ರೈತ ಸಂಘದವರ ವಕ್ತವ್ಯದಲ್ಲಿ ನಗೆಯಿಲ್ಲವೇ?

ಹೀಗಾಗಿ ತಪ್ಪಿರುವುದು ಬರಹಗಾರರಲ್ಲಲ್ಲ. ಅದರಲ್ಲಿ ಹಾಸ್ಯ ಕಾಣದ, ಅದನ್ನು ನೋಡಿ ನಗಲಾರದ ಓದುಗರಲ್ಲಿ, ವಿಮರ್ಶಕರಲ್ಲಿ.

ನನ ಓದಿನ ಬಗ್ಗೆ: ನೆನಪಿಸಿಕೊಂಡಾಗಲೆಲ್ಲ ನಗುವಂಥ ಕಥೆ ಯಶವಂತ ಚಿತ್ತಾಲರ ಕಳ್ಳ ಗಿರಿಯಣ್ಣ, ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ; ಬೇಂದ್ರೆ ಬರೆದ ತಮ್ಮದೇ ಅಣಕವಾಡು - ಬೆಕ್ಕು ಹಾರುತಿದೆ ನೋಡಿದಿರಾ; ವೈನ್‍ಕೆ ಅವರ ವಂಡರ್ ಪುಸ್ತಕಗಳು, ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ [ಕವಿ-ತೆಗಳು], ತೀರ್ಥರೂಪ [ಅಥವಾ ಮಧ್ಯ ಇಷ್ಟು ಟೈಟ್ ಆದ್ರೆಹೇಗೆ ಸ್ವಾಮಿ]; ಡುಂಡಿರಾಜರ ಹನಿಗಳು; ವಿಜಿಭಟ್ಟರ ಕವಿತೆಗಳು; ಕೆವಿ ತಿರುಮಲೇಶರ ತರಂಗಾಂತರ ಅನ್ನುವ ಗಂಭೀರ ಕಿರುಕಾದಂಬರಿಯ ಭಾಗಗಳು, ವಿರೇಚನ ಅನ್ನುವ ಕಥೆ, ಮತ್ತು ಅವರದೇ ಅವಧ ಕವಿತಾಗುಚ್ಛ. ನೆನಪಿಸಿಕೊಳ್ಳದಿದ್ದರೂ ನಗು ತರಿಸುವ ಪುಸ್ತಕ ಮೊಗಳ್ಳಿ ಗಣೇಶರ ತಕರಾರು.


  

Sunday, March 29, 2009

ಶುಷ್ಕ ವಕ್ರ ಈ ನಗೆ



ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ವ್ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.

ಅಹಮದಾಬಾದಿನ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದೀರಿ. ಎದುರಿಗೆ ಒಂದು ದೊಡ್ಡ ಫಲಕ. "ಕುಡಿದು ಕಾರನ್ನು ಓಡಿಸುವುದು ಅಪಾಯಕಾರಿ". ಸ್ವಾತಂತ್ರ ಬಂದಾಗಿನಿಂದಲೂ ಸಂಪೂರ್ಣ ಪಾನ ನಿಷೇಧ ಇರುವ ರಾಜ್ಯದ ಪ್ರಮುಖನಗರದ ಪೋಲೀಸು ಇಲಾಖೆ ಈ ಇಂಥ ಫಲಕವನ್ನು ಹಾಕಿದರೆ ನಿಮಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಈ ಫಲಕದ ಹಿಂದಿರಬಹುದಾದ ವಿಚಿತ್ರ ವಿಡಂಬನೆ - ಪಾನ ನಿಷೇಧವನ್ನು ಎಷ್ಟರ ಮಟ್ಟಿಗೆ ಆ ನಗರದಲ್ಲಿ ಸಫಲಗೊಳಿಸಿದ್ದಾರೆನ್ನುವ ಪ್ರಶ್ನೆಯಿಂದ ಹಿಡಿದು, ಗುಂಡುಸಿಗದ ಚಡಪಡಿಕೆಯ ನಡುವೆ ನಿಮ್ಮನ್ನು ಕುಹಕ ಮಾಡುತ್ತಿರುವ ಸರಕಾರದ ಸೇಡಿನ ಬಗೆಗಿನವರೆಗೂ ಆಲೋಚನೆ ಹೊರಟರೂ, ಕಡೆಗೆ ಮುಖದಲ್ಲಿ ಉಳಿಯುವುದು ಒಂದು ಮಂದಹಾಸವೇ.. ಇದು ಗುಂಡಿರದ ಗುಜರಾತಿನ ಡ್ರೈ ಹ್ಯೂಮರ್ರೋ, ರೈ ಹ್ಯುಮರ್ರೋ ತಿಳಿಯದು. 

ಹಾಗೆ ನೋಡಿದರೆ ಸಾಹಿತ್ಯದಲ್ಲಿ ವಿದೂಷಕನ ಪಾತ್ರವೇ ರೈಗೆ ಹೇಳಿಮಾಡಿಸಿದ್ದು. ದೊಡ್ಡ ದೊಡ್ಡ ಅಹಂನ ಬೆಲೂನುಗಳನ್ನು ಪುಟ್ಟ ಪುಟ್ಟ ಸೂಜಿಗಳಿಂದ ಚುಚ್ಚುವ, ಎಲ್ಲಿಂದ ಹೇಗೆ ಏಟು ಬಿತ್ತು ಎಂದು ತಿಳಿಯದಂತೆಯೇ ತಟ್ಟಿಸುವುದು "ಅಳುವುದೋ ನಗುವುದೋ ನೀವೇ ಹೇಳಿ" ಎನ್ನುವಂತೆ ಮಾಡಿಸುವ ತೆನಾಲಿ ರಾಮ ಮತ್ತು ಬೀರಬಲ್ಲರೂ ಈ ರೀತಿಯ ಹಾಸ್ಯದ ದೊಡ್ಡ ಉದಾಹರಣೆಗಳು. ಹೀಗಾಗಿ ವ್ರೈಯನ್ನು ಒಂದು ರೀತಿಯಲ್ಲಿ ವಿದೂಷಣ ಎಂದು ಕರೆಯಬಹುದೇನೋ! - ಇದೂ ಒಂದು ಬಗೆಯ ದೂಷಣವೇ.. ಆದರೆ ಅದು ಪಡೆಯುವ ರೂಪ ವಿಚಿತ್ರದ್ದಾದ್ದರಿಂದ ವಿದೂಷಣ.

ಹಾಲಿವುಡ್ಡಿನಲ್ಲಿ ವುಡೀ ಆಲೆನ್ ವಿದೂಷಣಕ್ಕೆ ಪ್ರಮುಖ ಉದಾಹರಣೆಯಾಗಿ ನಿಲ್ಲುತ್ತಾರೆ. "ವಾಟ್ಸ್ ಅಪ್ ಟೈಗರ್ ಲಿಲ್ಲಿ" ಅನ್ನುವ ಬಾಂಡ್ ಶೈಲಿಯ ಚಿತ್ರದ ಅಣಕವಾಡಿನಿಂದ ಹಿಡಿದು - ಸ್ಲೀಪರ್ ಅನ್ನುವ ಸೈನ್ಸ್ ಫಿಕ್ಷನ್ ಬಗೆಯ ಚಿತ್ರದಲ್ಲೂ ನಿಮಗೆ ಈ ವ್ರೈ ಕಾಣಸಿಗುತ್ತದೆ. ಸ್ಲೀಪರಿನಲ್ಲಿ ಎಲ್ಲವೂ ಭವಿಷ್ಯದಲ್ಲಿ ನಡೆಯುತ್ತದೆ. ಮೈಥುನಕ್ಕೂ ಒಂದು ಯಂತ್ರ! ಆ ಕಾರ್ಯದಿಂದ ಹೊಮ್ಮುವ ಸದ್ದುಗಳೂ ಸ್ಟೀರಿಯೋಫೋನಿಕ್ ಸರೌಂಡ್ ಸೌಂಡಿನಂತೆ ಹೊರಹೊಮ್ಮುತ್ತದೆ. 

ಹಾಗೆಯೇ ವುಡಿಯದಲ್ಲದ ಮತ್ತೊಂದು ಚಿತ್ರ ’ವಾಟ್ಸ್ ಸೋ ಬ್ಯಾಡ್ ಅಬೌಟ್ ಫೀಲಿಂಗ್ ಗುಡ್?" ಈ ಚಿತ್ರದಲ್ಲಿ ಒಂದು ಪಕ್ಷಿಯಿಂದಾಗಿ ಒಂದು ವೈರಸ್ ನಗರಾದ್ಯಂತ ಹಬ್ಬುತ್ತದೆ. ಆ ವೈರಸ್ಸಿನಿಂದಾಗಿ ನಗರದ ಜನರೆಲ್ಲಾ ಹಗುರವಾಗಿ ಖುಷಿಯಿಂದ ಇರುತ್ತಾರೆ. ಆದರೆ ಆ ನಗರದ ಮ್ಯುನಿಸಿಪಾಲಿಟಿ ಆ ವೈರಸ್ಸನ್ನು ತಡೆಗಟ್ಟಿ ಈ ರೋಗವನ್ನು ನಿರ್ನಾಮ ಮಾಡಬೇಕು. ಹೀಗೆ ಆ ವೈರಸ್ಸನ್ನು ಹಬ್ಬುವ ಆ ಪಕ್ಷಿಯನ್ನು ಹಿಡಿದು ’ಫೀಲಿಂಗ್ ಗುಡ್’ ರೋಗವನ್ನು ತಡೆಗಟ್ಟುವುದೇ ಚಿತ್ರದ ಕಥೆ..... ಯಾವುದು ರೋಗ, ಏನನ್ನು ತಡೆಗಟ್ಟಬೇಕು... 

ಹಿಂದಿ ಸಿನೇಮಾದಲ್ಲಿ ರೈನ ಪ್ರಯೋಗ ಮಾಡಿರುವವರಲ್ಲಿ ನನಗೆ ನೆನಪಾಗುವುದು ಶ್ಯಾಂ ಬೆನೆಗಲ್.  ಮಂಡಿ ಸಿನೇಮಾದಲ್ಲಿ ಕೋಠಿಯನ್ನು ನಡೆಸುವ ಶಬನಾ ಮನೆಯಲ್ಲಿ ನಾಸಿರುದ್ದೀನ್ ಶಾ ಕೆಲಸ ಮಾಡುತ್ತಿರುತ್ತಾನೆ. ಶಬನಾ ಬಳಿ ಒಂದು ಗಿಳಿ. ಗಿಳಿ ಪಂಜರದಲ್ಲಿ. ನಾಸಿರ್ ಅತೀ ಮೂರ್ಖ ಕೆಲಸಗಾರ. ಅವನು ಎರಡೂ ಕೈಯಲ್ಲಿ ನೀರು ತುಂಬಿದ ಬಕೆಟ್ಟನ್ನು ಹೊತ್ತು ತರುತ್ತಿರುವಾಗ ಗಿಳಿ ಪಂಜರದಿಂದ ಹಾರಿಹೋಗುತ್ತದೆ. ಅದನ್ನು ಹಿಡಿಯುವ ಕೆಲಸ ನಾಸಿರ್‍ ನದ್ದು. ಅವನು ಬಕೆಟ್ಟನ್ನು ಕೆಳಗಿಡದೆಯೇ ಗಿಣಿಯನ್ನು ಅಟ್ಟಿಸಿ ಮನೆಯೆಲ್ಲಾ ಓಡುತ್ತಾನೆ. ಮುಂದೆ ಸ್ಮಿತಾ ಪಾಟೀಲ್ ಪಾತ್ರವೂ ಅವಳಿಂದ ಹೀಗೇ ತಪ್ಪಿಸಿಹೋಗುವುದಕ್ಕೆ ಇದು ತಯಾರಿಯ ಸೀನಿನಂತೆ ಕಾಣುತ್ತದೆ. ಇಲ್ಲಿ ನಾಸಿರ್ ನ ಪ್ರಯತ್ನವನ್ನು ನೋಡಿ ನಗಬೇಕೇ?...

ತಿರುಮಲೇಶರ ಕಾವ್ಯದಲ್ಲಿ ನಮಗೆ ಸಾಕಷ್ಟು ವ್ರೈ ಸಿಗುತ್ತದೆ.
"ಅಶ್ವಿನಿಗೆ ಕುಂಡೆಯಲ್ಲೊಂದು ಕುರುವಾದ್ದರಿಂದ
ಅವಳು ಒಂದು ರೀತಿಯ ಲಾಸ್ಯದಿಂದ ನಡೆಯುತ್ತಾಳೆ
ಒಂದು ರೀತಿಯ ಆಲಸ್ಯದಿಂದ ಕೂಡುತ್ತಾಳೆ.
ಜನ ದಂಗಾಗಿದ್ದಾರೆ
ಇಂಥ ಮಾದಕ ನಡಿಗೆಯನ್ನು ಅವರು ಹಿಂದೆಂದೂ ನೋಡಿಯೇ ಇಲ್ಲ...."
ಇಲ್ಲಿ ಯಾರು ಯಾರನ್ನು ಯಾವರೀತಿಯಾಗಿ ಲೇವಡಿ ಮಾಡುತ್ತಿದ್ದಾರೆ ಅನ್ನುವುದು ತಿಳಿಯುವುದಕ್ಕೆ ಮುನ್ನವೇ ಚುರುಕು ಮುಟ್ಟಿ ಹೋಗಿರುತ್ತದೆ.

ಹೀಗೇ ಗುರುಪ್ರಸಾದ್ ಕಾಗಿನೆಲೆಯವರ ಬೀಜ ಕಥೆಯ ಭಾಗವನ್ನು ನೋಡಿ:
"ಟೆಸ್ಟಿಕಲ್ಲಿನ ಕ್ಯಾನ್ಸರು ತುಂಬಾ ಒಳ್ಳೆಯ ಕ್ಯಾನ್ಸರಂತೆ. ಪರೀಗೆ ಕ್ಯಾನ್ಸರಲ್ಲೂ ಒಳ್ಳೇದಿರುತ್ತೆ ಅಂತ ಗೊತ್ತಿರಲಿಲ್ಲ. ಫಣೀಶ ಹೇಳಿದ್ದ: 'ಅಕಸ್ಮಾತ್ ದೇವರು ಏನಾರ ಪ್ರತ್ಯಕ್ಷ ಆಗಿ ನಿನಗೆ ಯಾವುದಾದರೂ ಒಂದು ಕ್ಯಾನ್ಸರು ಬರಲೇಬೇಕು, ಲಂಗು, ಲಿವರು, ಕಿಡ್ನಿ, ಬ್ರೈನು, ಬ್ರೆಸ್ಟು ಯಾವುದು ಬೇಕು ಕೇಳ್ಕೋ ಅಂತ ಕೇಳಿದರೆ, ಗಂಡಸರಿಗೆ ಬೆಸ್ಟ್ ಅಂದರೆ ಟೆಸ್ಟಿಕಲ್ಲಿನ ಕ್ಯಾನ್ಸರ್ ಕೊಡಪ್ಪಾ ಅಂತ ಕೇಳ್ಕೋಬೇಕು, ಗೊತ್ತಾ. ಬರೀ ಕೀಮೋ ತೆಗೋಬೇಕಾದರೆ ಮಾತ್ರ ತೊಂದರೆ. ಆಮೇಲೆ, ನೂರಕ್ಕೆ ಆಲ್ಮೋಸ್ಟ್ ನೂರುಭಾಗ ವಾಸಿ ಆಗುತ್ತೆ." ಇದರಲ್ಲಿ ಕಾಣುವ ಹಾಸ್ಯ ಕಪ್ಪು ಹಾಸ್ಯವಲ್ಲ, ಒಂದು ರೀತಿಯ ತೀವ್ರ ವಿಡಂಬನೆಯಿಂದ ಕೂಡಿದ್ದು. 

ಅಂಗೂರ್ ಚಿತ್ರದಲ್ಲಿ ನಾಯಕನ ಸಹಾಯಕ ಹಗ್ಗ ಕೊಳ್ಳಲು ಹೋಗುತ್ತಾನೆ. ಅಂಗಡಿಯಲ್ಲಿ ಹಗ್ಗದ ಬೆಲೆ ವಿಚಾರಿಸುತ್ತಾನೆ. ಅಂಗಡಿಯವನು ಯಾವುದಕ್ಕೆ ಉಪಯೋಗಿಸುತ್ತೀರಿ? ಅನ್ನುವುದಕ್ಕೆ ಸಹಾಯಕ ಗಂಭೀರವಾಗಿಯೇ "ನೇಣು ಹಾಕಿಕೊಳ್ಳಲು" ಎನ್ನುತ್ತಾನೆ. ಅಂಗಡಿಯವನು... "ಅದು ಬೇಡ, ಇದು ತೆಗೊಳ್ಳಿ ಮಜಬೂತಾಗಿದೆ" ಅನ್ನುತ್ತಾ ಬೇರೆಯದೇ ಒಂದು ಹಗ್ಗವನ್ನು ಎತ್ತಿ ಕೊಡುತ್ತಾನೆ. ಆ ಹಗ್ಗದ ಮೇಲೆ ಚೌಕಾಶಿ ನಡೆಯುತ್ತದೆ. ಈ ಘಟನೆಯನ್ನು ಮಿಕ್ಕ ಘಟನಾವಳಿಯ ನಡುವೆ ಜೋಡಿಸದೇ ಕಂಡರೆ ವ್ರೈ ಎನ್ನಬಹುದು. ಆದರೆ, ಆ ಘಟನೆ ನಡೆಯುವುದೇ ಬೇರೊಂದು ಪರಿಸ್ಥಿತಿಯಲ್ಲಿ. ಅಲ್ಲಿ ಯಾರಿಗೂ ನೇಣು ಹಾಕಿಕೊಳ್ಳುವ ಉದ್ದೇಶವಿಲ್ಲ ಅನ್ನುವುದು ನೋಡುಗನಿಗೆ ಗೊತ್ತು. ಹೀಗಾಗಿ ಅದು ಶುದ್ಧ ಹಾಸ್ಯವಾಗಿ ಯಾವ ವಿಶೇಷಣಕ್ಕೂ ಅರ್ಹವಾಗುವುದಿಲ್ಲ!

ಚಾರ್ಲಿ ಚಾಪ್ಲಿನ್ ಚಿತ್ರಗಳು ಸ್ಲಾಪ್ ಸ್ಟಿಕ್ಕಿನಂತೆ ಕಂಡರೂ ಅದರಲ್ಲಿನ ಹಾಸ್ಯ ಒಮ್ಮೊಮ್ಮೊ ಡಾರ್ಕ್ ಆಗಿಯೂ ಹೆಚ್ಚಾಗಿ ರೈ ಆಗಿಯೂ ಇರುವುದನ್ನು ನೋಡಬಹುದು. ಕಿಡ್ ಚಿತ್ರದಲ್ಲಿ ಮೊಳೆ ತಿನ್ನುವ ಪ್ರಸಂಗ, ಗ್ರೇಟ್ ಡಿಕ್ಟೇಟರ್ ನಲ್ಲಿ ಭೂಗೋಳದ ಬಲೂನನ್ನ ಹಿಡಿದು ಕುಣಿಡಾಡುತ್ತಿರುವ ಚಾಪ್ಲಿನ್... ಹಾಗೂ ಅದು ಟಪ್ಪೆಂದು ಅವನ ಮುಖದಲ್ಲಿ ಸ್ಫೋಟಗೊಳ್ಳುವ ರೀತಿ ವ್ರೈನ ನಮೂನೆ! ಮಾಡರ್ನ್ ಟೈಮ್ಸ್ ನಲ್ಲಿ ದೊಡ್ಡ ಟ್ರಕ್ಕಿನ ಹಿಂದೆ ಒಂದು ಕೆಂಪು ಬಣ್ಣದ ಬಟ್ಟೆ ನೇತಾಡುತ್ತಿರುವುದನ್ನು ಚಾಪ್ಲಿನ್ ಹಿಡಿದಾಗ ಅವನನ್ನು ಕಮ್ಯುನಿಸ್ಟ್ ಎಂದು ಬಂಧಿಸುವ ಘಟನೆ ರೈನ ಲಕ್ಷಣವನ್ನು ತೋರಿಸುತ್ತದೆ. ಕಪ್ಪು ಬಿಳುಪು ಚಿತ್ರದಲ್ಲಿ - ಮಾತೇ ಇಲ್ಲದ ಮೂಕಿಯಲ್ಲಿ ಆ ಬಟ್ಟೆಯ ಬಣ್ಣವನ್ನು ಎಷ್ಟು ಸಶಕ್ತವಾಗಿ ’ಕೆಂಪು’ ಎನ್ನುವ ನಂಬಿಕೆ ಬರುವಂತೆ ಚಾಪ್ಲಿನ್ ಮಾಡುತ್ತಾರೆ ಎಂದು ಕಂಡಾಗ ಆ ಕಲೆ ಎಲ್ಲವನ್ನೂ ಮೀರಿ ನಿಲ್ಲುವುದಿಲ್ಲವೇ? 

ಹಾಗೆ ನೋಡಿದರೆ ಚಾಪ್ಲಿನ್ ಕ್ಯಾಥೋಲಿಕ್ ಕ್ರಿಸ್ಟಿಯನ್ ಅನ್ನುವ ಮಂಗಳೂರಿನವರ ಕುಹಕ ಯಾವ ಬ್ರಾಂಡಿನ ಹಾಸ್ಯವೋ ನನಗೆ ತಿಳಿಯದು. ಹೀಗೆಯೇ ಪ್ರಮೋದ್ ಮುತಾಲಿಕ್ ಗೆ ಪಿಂಕ್ ಚೆಡ್ಡಿಗಳನ್ನು ಕಳಿಸಿದ ಮುಂಬೈಯಿನ ಪಬ್-ಗೋಯಿಂಗ್, ಲೂಸ್, ಫಾರ್ವಡ್ ವುಮೆನ್ ಮಾಡಿದ ಚರ್ಯೆಯಲ್ಲಿ ಐರನಿ, ಸಟೈರು, ಕುಹಕ ವಿದ್ದರೂ ರೈ ಇರಲಿಲ್ಲವೆನ್ನಿಸುತ್ತದೆ. ಆದರೆ ನಾವಿರುತ್ತಿರುವ ಹುಚ್ಚು ಪ್ರಪಂಚದಲ್ಲಿ ನಮಗೆ ಒಂದು ಕಿರುನಗು ಬೀರಲೂ ಯಾವುದೇ ಬ್ರಾಂಡಿನ ಹಾಸ್ಯದ ಅವಶ್ಯಕತೆಯಿರಬಹುದು! ಆದರೆ ಕಾಮೆಡಿ ಕಿಲಾಡಿಗಳು ಅನ್ನುವ ಹಾಸ್ಯವನ್ನೇ ಮಾರ ಹೊರಟ ಚಿತ್ರಹಿಂಸಾತ್ಮಕ ಕಾರ್ಯಕ್ರಮದ ಹಿಂದೆ ಯಾವ ರೀತಿಯ ಪ್ರಾಕ್ಟಿಕಲ್ ಹಾಸ್ಯವಿರಬಹುದು. ಯಾರಿಗಾದರೂ ತಿಳಿದರೆ ಅದರ ಮೀಮಾಂಸೆ ನನಗೆ ಕಳಿಸಿ ಪ್ಲೀಸ್....


  

Sunday, March 8, 2009

ನಾವೇಕೆ ಬ್ಲಾಗ್ ಮಾಡುತ್ತೇವೆ!



ನನ್ನ ಸಂದರ್ಶನ

ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ?
ನನಗೆ ಬ್ಲಾಗ್ ಬರೆಯುವ ಐಡಿಯಾ ನನ್ನ ವಿದ್ಯಾರ್ಥಿಗಳಿಂದ ಬಂತು. ಅಂತರ್ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಬರೆಯುವುದನ್ನ, ಮುಖ್ಯವಾಗಿ ನನ್ನದೇ ಪಾಠಗಳ ಬಗ್ಗೆ ಬೆರೆಯುವುದನ್ನ ಕಂಡಾಗ ನನಗೆ ಅದರ ಅದ್ಭುತ ಸಾಧ್ಯತೆ ಗೋಚರವಾಯಿತು. ಸಾಲದ್ದಕ್ಕೆ ನಾನು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದೆ.ಇದಕ್ಕೆ ಕಾರಣ ನನ್ನ ಇಂಗ್ಲೀಷ್ ಬರಹವನ್ನು ಕಂಪ್ಯೂಟರ್ನಲ್ಲಿ ಬರೆಯುತ್ತಿದ್ದುದರಿಂದ ಕಾಗದದ ಮೇಲೆ ಕೈನಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿತ್ತು. ಕನ್ನಡದಲ್ಲಿ ನಾನು ಐ-ಲೀಪ್ ಉಪಯೋಗಿಸುತ್ತಿದ್ದೆ. ಅದನ್ನ ಪ್ರತಿಬಾರಿ ಉಪಯೋಗಿಸುವಾಗಲೂ ಅದರ ಸಿ.ಡಿಯನ್ನು ಕಂಪ್ಯೂಟರ್ನಲ್ಲಿ ತೂರಿಸಿಬೇಕಾಗುತ್ತಿತ್ತು.. ಹೀಗಾಗಿ ಕನ್ನಡದ ನನ್ನ ಬರವಣಿಗೆ ನಿಂತೇ ಹೋಗಿತ್ತು. ಬ್ಲಾಗ್ ಮಾಧ್ಯಮವನ್ನು ನಾನು ಕಂಡುಕೊಂಡಾಗ ನನಗೆ ಮತ್ತೆ ಅಕ್ಷರಲೋಕಕ್ಕೆ ಕಾಲಿಡುವ ಸಾಧ್ಯತೆ ಕಾಣಿಸಿತು. ಜೊತೆಗೆ ಇದು ಹೊಸ ಮಾಧ್ಯಮವಾದ್ದರಿಂದ ಇದರಲ್ಲಿ ಪ್ರಯೋಗ ಮಾಡುವುದರಲ್ಲಿ ಒಂದು ಬಗೆಯ ಥ್ರಿಲ್ ಇತ್ತು.


ನೀವು ಬ್ಲಾಗ್ ಬರೆಯುವುದು ಏಕೆ?
ನಾನು ಮೂಲತಃ ಬರಹಗಾರ. ನನಗೆ ಬರವಣಿಗೆಯ ಮಾಧ್ಯಮಗಳಲ್ಲಿ ಪ್ರಯೋಗ ಮಾಡಬೇಕೆನ್ನಿಸುವುದು ಸಹಜ. ಕಥೆ, ಕಾದಂಬರಿ, ಕವಿತೆ, ಪ್ರಬಂಧಗಳ ಪ್ರಕಾರಗಳ ಪ್ರಾಕಾರಗಳನ್ನು ಮಿತಿಗಳನ್ನು ಮೀರಲು ಬ್ಲಾಗ್ ನನಗೆ ಸಹಾಯ ಮಾಡಿದೆ.

ಬ್ಲಾಗ್ ಬರೆಯುತ್ತಾ ಬರೆಯುತ್ತಾ ನಿಮಗೆ ಏನು ಸಿಕ್ಕಿದೆ?
ನನಗೆ ಸಿಕ್ಕಿದ್ದು ಸಫಲತೆ, ಸಂತೋಷ.. ಇದೇ ಸಮಯದಲ್ಲಿ ಒಂದು ಪತ್ರಿಕೆ ನನ್ನನ್ನು ಒಂದು ಕಾಲಂ ಬರೆಯಲು ಕೇಳಿದರು. ಆದರೆ ನನ್ನ ನೌಕರಿಯ ಮಿತಿಯಲ್ಲಿ, ನನಗೆ ಇರುವ ಓಡಾಟದ ಒತ್ತಡದಲ್ಲಿ, ಕನ್ನಡನಾಡಿನಿಂದ ದೂರವಿರುವುದರಿಂದ ಕನ್ನಡದ ಸಂದರ್ಭಕ್ಕೆ ಸಮರ್ಪಕವೆನ್ನಿಸುವ ರೀತಿಯಲ್ಲಿ ಕಾಲಂ ಬರೆಯಲು ಸಾಧ್ಯವಿಲ್ಲವೆಂದು ನನಗೆ ಮನದಟ್ಟಾಯಿತು. ಜೊತೆಗೆ ಪತ್ರಿಕೆಗಳಲ್ಲಿ ಬರೆಯುವಾಗ ಇರುವ ಪದಮಿತಿಯ ಬಂಧನವೂ ನನ್ನ ಮನಸ್ಸಿನಲ್ಲಿತ್ತು. ಆಗ ನನಗೆ ಬ್ಲಾಗಿನಲ್ಲಿ ಅತ್ಯಂತ ಅದ್ಭುತವಾದ ಮಾಧ್ಯಮ ದೊರೆಯಿತು, ಯಾಕೆಂದರೆ ಇದು ಒಂದು ರೀತಿಯಲ್ಲಿ ಅನಿಯತಕಾಲಿಕವಾಗ ಬಹುದು, ಪದಮಿತಿಯಿಲ್ಲಿದೇ ಬರೆಯಬಹುದು, ಇದಕ್ಕೆ ಬೇಕಾದ ಚಿತ್ರಗಳನ್ನು, ಇದರ ವಿನ್ಯಾಸವನ್ನೂ ನಾನೇ ರೂಪಿಸಬಹುದಿತ್ತು. ಆಸಕ್ತಿ ಹುಟ್ಟಿಸುವ ಲೇಖನಗಳಿಗ ಕೊಂಡಿಯನ್ನೂ ಕೊಡಲು ಸಾಧ್ಯವಿತ್ತು.. ಜೊತೆಗೆ ಇಲ್ಲಿಯೂ ಸಲ್ಲದ ಅಲ್ಲಿಯೂ ಸಲ್ಲದ ಲೇಖನಗಳನ್ನು ನಾನು ಬರೆಯಲು ಸಾಧ್ಯವಾಯಿತು.. ನನ್ನ ಬರಹದಲ್ಲಿ ಕೆಲ ಲೇಖನಗಳನ್ನು ದಿನ/ವಾರ ಪತ್ರಿಕೆಗಳು ಪ್ರಕಟಿಸಲು ಇಷ್ಟಪಡುವಂಥವುದಲ್ಲ. ಸಾಹಿತ್ಯಿಕ ಪತ್ರಿಕೆಗಳು ಇರುವುದು ಬೆರಳೆಣಿಕೆಯಷ್ಟು.. ಅವೂ ಅನಿಯತಕಾಲಿಕಗಳಾದ್ದರಿಂದ ಯಾವಾಗ ಪ್ರಕಟಗೊಳ್ಳುವುದೋ ತಿಳಿಯದು.. ಹೀಗಾಗಿ ಈ ಮಾಧ್ಯಮ ನನಗೆ ಹಿಡಿಸಿತು. ನಾನು ಕನ್ನಡದಲ್ಲಲ್ಲದೇ ಇಂಗ್ಲೀಷಿನಲ್ಲೂ ಒಂದು ಬ್ಲಾಗ್ ಪ್ರಾರಂಭಿಸಿದೆ. ಕೆಲ ಲೇಖನಗಳು ಎರಡು ಭಾಷೆಗಳಲ್ಲೂ ಹಚ್ಚಿರುವೆನಾದರೂ, ಕೆಲವು ಆಯಾ ಭಾಷೆಯ ಸಂದರ್ಭಕ್ಕೆ ಒಗ್ಗುವವು ಅನ್ನಿಸಿದೆ..

ಓದುಗರ ಸ್ಪಂದನ ಹೇಗಿದೆ?
ಚೆನ್ನಗಿದೆ, ಆದರೆ ಸಾಲದು. ಬ್ಲಾಗಿನ ಅದ್ಭುತವೆಂದರೆ ಒಂದು ಚರ್ಚೆ ಸಂಭಾಷಣೆ ನಡೆಸಲು ಸಾಧ್ಯ. ಆದರೆ ನನ್ನ ಬ್ಲಾಗಿಗೆ ಮೊದಲು ಬಂದಷ್ಟು ಪ್ರತಿಕ್ರಿಯಗಳು ಈಗೀಗ ಬರುತ್ತಿಲ್ಲ. ಅದಕ್ಕೆ ಕಾರಣ ಬಹುಶಃ ಅಲ್ಲಿನ ಲೇಖನಗಳು ತುಸು ಗಂಭೀರವಾಗಿರುವುದೇ ಆಗಿರಬಹುದು. ಸಾಮಾನ್ಯವಾಗಿ ಈ ಮಾಧ್ಯಮವನ್ನು ಉಪಯೋಗಿಸುವವರು, ಇದನ್ನ ಒಂದು ದಿನಚರಿಯ ಪುಟದಂತೆ, ಲೈಟಾಗಿ ಉಪಯೋಗಿಸುತ್ತಾರೆ. ಉದಾಹರಣೆಗ ಸೌರವ್ ಗಂಗೂಲಿಯ ಕಪ್ತಾನಿಯ ಬಗ್ಗೆ ಬರೆದರೆ, ಅದಕ್ಕೆ ಬಹುಶಃ ಹೆಚ್ಚು ಪ್ರತಿಕ್ರಿಯೆ ಬರಬಹುದು.. ಆದರೆ ನಾನು ಬ್ಲಾಗಿನ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ತುಸು ಭಿನ್ನ ರೀತಿಯಲ್ಲಿ ಹೀಗಾಗಿ ನನ್ನ ಆಶಯದಷ್ಟು ಪ್ರತಿಕ್ರಿಯೆ ಬರುತ್ತಿಲ್ಲವೆಂಬ ನನ್ನ ಅಸಮಾಧಾನ ಸಹಜವೇ.. ಆಸೆಗೂ ಮಿತಿಯಿರಬೇಕು!!


ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು?
ನನಗೆ ಬ್ಲಾಗ್ ಈ ಥರದ ಮಹತ್ತರ ಸಾಧನೆ ಮಾಡುತ್ತದೆ ಅನ್ನಿಸುವುದಿಲ್ಲ.. ಆಯಾ ಭಾಷೆಗೆ ಇರುವ ಅನೇಕ ಪರಿಕರಗಳಲ್ಲಿ ಇದೂ ಒಂದು ಅಂತ ಅನ್ನಿಸುತ್ತದೆ. ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ. ಉದಾಹರಣೆಗೆ ವಿನ್ಯಾಸಕ್ಕಿರುವ ಪರಿಕರ "ಟೆಂಪ್ಲೇಟ್" ಇಂಗ್ಲೀಶ್ ಭಾಷೆಗೆ ಅನುಗುಣವಾಗಿ ಇದೆ. ಹೆಚ್ಟಿ‌ಎಂಎಲ್ ಜಾವಾ ತಿಳಿಯದ ನನ್ನಂಥವರಿಗೆ ಅದನ್ನು ಕನ್ನಡಿಸುವ ಕೆಲಸ ಕಷ್ಟದ್ದು. ಆದರೂ ನಾನು ಸಾಧ್ಯವಾದಷ್ಟು ಅದರವಿನ್ಯಾಸವನ್ನು ಕನ್ನಡಿಸಿದ್ದೇನೆ.. ಆದರೂ ತಾರೀಖು, ತಿಂಗಳುಗಳ ಹೆಸರುಗಳು ಇನ್ನೂ ಇಂಗ್ಲೀಷಿನಲ್ಲೇ ಇವೆ.. ಈ ಮಾಧ್ಯಮದಲ್ಲಿ ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ. ಸಧ್ಯಕ್ಕೆ ಕೈಬೆರೆಳೆಣಿಕೆಯಷ್ಟು ಜನ ಬ್ಲಾಗ್ ಬರೆಯುತ್ತಿದ್ದಾರೆ.

ನಿಮ್ಮ ಮೆಚ್ಚಿನ ಬ್ಲಾಗ್‌ಗಳು ಯಾವುವು?
ಮಜಾವಾಣಿ [majavani.blogspot.com] ಎಂಬ ಫೇಕ್ ಪತ್ರಿಕೆಯನ್ನು ವಾರ್ತಾವಿದೂಷಕ ಎಂಬವರು ನಡೆಸುತ್ತಿದ್ದಾರೆ.. ಅತ್ಯುತ್ತಮ ಹಾಸ್ಯಕ್ಕೆ ನಾನು ಆ ಬ್ಲಾಗನ್ನು ಓದುತ್ತೇನೆ. ಓ.ಎಲ್.ನಾಗಭೂಷಣಸ್ವಾಮಿ ತಮ್ಮ ಬ್ಲಾಗನ್ನು "ಸಂಪದ" ಎಂಬ ಸಮೂಹದಲ್ಲಿ ಬರೆಯುತ್ತಾರೆ [sampada.net]. ಅದೂ ನನಗೆ ಮೆಚ್ಚುಗೆಯೇ.. ಇಂಗ್ಲೀಷಿನಲ್ಲಿ ಉಮಾ ದಾಸ್ಗುಪ್ತಾ ಬರೆಯುವ ಬ್ಲಾಗೂ ನನಗೆ ಇಷ್ಟ [indianwriting.blogspot.com]. ನನಗೆ ಇಷ್ಟವಾದ ಅಂತರ್ಜಾಲದ ಪುಟಗಳ ಕೊಂಡಿಗಳನ್ನು ನನ್ನ ಬ್ಲಾಗಿನಲ್ಲೇ ಕೊಟ್ಟಿದ್ದೇನೆ.