"When I was a boy of 14, my father
was so ignorant I could hardly stand to
have the old man around. But when
I got to be 21, I was astonished at how
much the old man had learned in
seven years."
Mark Twain
ಸುಮಾರು ಹದಿನೈದು ವರ್ಷಕಾಲ ಮೇಷ್ಟರ ಕೆಲಸ ಮಾಡಿದಾಗ ಸಹಜವಾಗಿಯೇ ಒಂದು ಸೀನಿಯಾರಿಟಿ ಬಂದುಬಿಡುತ್ತದೆ. ಜೊತೆಗೆ "ನಾನು ಮೇಷ್ಟರ ಕೆಲಸ ಪ್ರಾರಂಭಮಾಡಿದಾಗ ವಿದ್ಯಾರ್ಥಿಗಳು ಎಷ್ಟು ಮರ್ಯಾದೆಯಿಂದ ಇದ್ದರು.. ಈಗ ಕಾಲ ಬದಲಾಗಿದೆ" ಎಂದು ಕರುಬುವ ಪರಿಸ್ಥಿತಿ ಉಂಟಾಗಿದ್ದರೆ ಆ ಮೇಷ್ಟರಿಗೆ ಮಧ್ಯವಯಸ್ಸು ದಾಟುತ್ತಿದೆ ಅನ್ನುವುದು ಖಾತರಿ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ ಅವರ ಗುರುಗಳಿಗೂ ಇರುವ ಸಂಬಂಧ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಅನ್ನುವುದು ಎಷ್ಟು ನಿಜವೋ ವ್ಯಕ್ತಿಯ ಸಮಯ, ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ ಅನ್ನುವುದೂ ಅಷ್ಟೇ ನಿಜ. ಆದರೂ ನಾವುಗಳು "ಇಂದಿನ ವಿದ್ಯಾರ್ಥಿಗಳೇ ಬೇರೆ" ಎಂದು ಕರುಬುವುದನ್ನು ನಮ್ಮ ಭವ್ಯ ಚರಿತ್ರೆಯಲ್ಲಿ ಬದುಕುವುದನ್ನೂ ಬಿಡುವುದಿಲ್ಲ.
ಕಳೆದ ಹದಿನೈದು ವರ್ಷಗಳನ್ನು ತೆಗೆದು ಉನ್ನತ ವಿದ್ಯಾ ಸಂಸ್ಥೆಗಳಾದ ಇರ್ಮಾ ಅಥವಾ ಐಐಎಂಗಳಲ್ಲಿ ಗುರು-ಶಿಷ್ಯರ ಸಂಬಂಧಗಳು ಹೇಗೆ ಬದಲಾಗಿವೆ ಎನ್ನುವ ನನ್ನ ಖಾಸಗೀ ಯಾತ್ರೆಯನ್ನು ಅವಲೋಕಿಸಿದಾಗ ಕಾಣುವ ಬದಲಾವಣೆಗಳು, ಹಾಗೂ ನಾನು ಇದೇ ರೀತಿಯ ಉನ್ನತ ವ್ಯಾಸಂಗ ಮಾಡುತಿದ್ದಾಗ ಇದ್ದ ನನ್ನ ಗುರುಗಳೊಂದಿಗಿನ ಸಂಬಂಧಗಳ ಪರಿ ಮೂಲಭೂತವಾಗಿ ಬದಲಾಗಿದೆ. ಆದರೆ ಅದು ಪತನದ ದಾರಿ ಹಿಡಿದಿದೆ ಎಂದು ಹೇಳಲು ನಾನು ತಯಾರಿಲ್ಲ.
ನಮ್ಮ ಜೀವನದಲ್ಲಿ ಕಳೆದ ಮೂರು ದಶಕಗಳಲ್ಲಿ ಆಗಿರುವ ಮೂಲಭೂತ ಬದಲಾವಣೆಯ ಹಿನ್ನೆಲೆಯಲ್ಲಿ ಈ ಸಂಬಂಧಗಳನ್ನು ನಾವು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಹಾಗೂ ನಾನು ಕಲಿಸುವ ಐಐಎಂನಂತಹ ಸಂಸ್ಥೆಯ ಬೋಧನಾಪದ್ಧತಿಯ ಹಿನ್ನೆಲೆಯನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿನ ಬೋಧನಾ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಪೂರ್ಣಾವಧಿ ಕ್ಯಾಂಪಸ್ಸಿನಲ್ಲಿರುವುದೂ ಹಾಗೂ ತರಗತಿಯ ಆಚೆಯೂ ಕಲಿಕೆಯ ಪ್ರಕ್ರಿಯೆಯಿರುವ ಭಿನ್ನತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬರುತ್ತಾರೆ, ಹಾಗೂ ಅವರೆಲ್ಲ ಸಾಕಷ್ಟು ಜೀವನವನ್ನು ಕಂಡವರಾಗಿರುತ್ತಾರೆ ಅನ್ನುವುದನ್ನೂ ನಾವು ನನಪಿಟ್ಟುಕೊಳ್ಳಬೇಕಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನನ್ನ ಬೋಧಕರೊಂದಿಗೆ ನನಗಿದ್ದ ಸಂಬಂಧ ಹಾಗೂ ನನ್ನ ವಿದ್ಯಾರ್ಥಿಗಳೊಂದಿಗೆ ಕಾಲಾಂತರದಲ್ಲಿ ಬದಲಾಗುತ್ತಿರುವ ಸಂಬಂಧಗಳನ್ನು ಅವಲೋಕಿಸುತ್ತೇನೆ.
ಊಹಿಸಿಕೊಳ್ಳಿ:
- ಒಂದು ಎಸ್.ಟಿ.ಡಿ ಫೋನ್ ಮಾಡಲು ಹಾಸ್ಟೆಲ್ಲಿನಿಂದ ಒಂದು ಕಿಲೋಮೀಟರ್ ದೂರ [ಟೆಲಿಗ್ರಾಂ ಕೊಡಲು ಸಾಧ್ಯವಿರುವ] ಹೆಡ್ ಪೋಸ್ಟಾಫೀಸಿಗೆ ಹೋಗಬೇಕು. ರಾತ್ರೆ ಹನ್ನೊಂದರ ನಂತರ ಫೋನ್ ಮಾಡಿದರೆ ದಿನದ ದರದ ಕಾಲು ಭಾಗದಲ್ಲಿ ಮಾತನಾಡಬಹುದು.
- ಟೆಲಿವಿಷನ್ ಅನ್ನುವುದು ಕಪ್ಪು ಬಿಳುಪಿನ ಡಬ್ಬದಲ್ಲಿ ಬರುವ ರೈತರ ಕಾರ್ಯಕ್ರಮ. ಸಿನೇಮಾ ಅಂದರೆ ಥಿಯಟರಿಗೆ ಹೋಗಿ ನೂಕುನುಗ್ಗಲಲ್ಲಿ ಟಿಕೆಟ್ ಪಡೆದು ಬೆವರುತ್ತಾ ಪುಳಕಿತಗೊಂಡು ಬರಬೇಕು. ಅಥವಾ ೧೬ ಎಂಎಂನ ಪ್ರೊಜೆಕ್ಟರನ್ನು ಬಯಲಿನಲ್ಲಿಟ್ಟು ದೊಡ್ಡ ಪರದೆ ಕಟ್ಟಿ [ಸ್ವದೇಸ್ ಚಿತ್ರದಲ್ಲಿದ್ದಂತೆ] ನೋಡಬೇಕು.
ದೊಡ್ಡ ಮಹಾಪ್ರಬಂಧಗಳನ್ನು ಟೈಪ್ ಮಾಡಿಸಬೇಕು. ಅದನ್ನು ಬೈಂಡ್ ಮಾಡಿಸಲು ಎರಡು ದಿನದ ಕಾಲ ಸಮಯ ಬೇಕಾಗಿತ್ತು.
- ರೈಲಿನಲ್ಲಿ ದೂರದೂರಿಗೆ ಹೋಗಬೇಕಾದರೆ ಟಿಕೆಟ್ ಬುಕ್ ಮಾಡಿಸುವುದೂ ಒಂದು ದಿನದ ಕೆಲಸ. ರೈಲನ್ನು ಮಧ್ಯದಲ್ಲಿ ಬದಲಾಯಿಸಬೇಕಿದ್ದರೆ ಮುಂದಿನ ಸ್ಟೇಷನ್ನಿಗೆ ರೈಲ್ವೇ ಟೆಲಿಗ್ರಾಂ ಕೊಟ್ಟು ರಿಜರ್ವೇಷನ್ ಆಗಬಹುದೆಂದು ಪ್ರಾರ್ಥಿಸುತ್ತಾ ಇದ್ದಿರಬೇಕು.
ಜೀವನ ಹೀಗಿದ್ದಾಗ ಮನೆಗೆ ಫೋನ್ ಮಾಡುವುದೂ ದಿನಕ್ಕೆರಡು ಬಾರಿಯಲ್ಲ - ಬದಲಿಗೆ ವಾರಕ್ಕೊಮ್ಮೆ, ಅಥವಾ ಎರಡು ವಾರಕ್ಕೊಮ್ಮೆ. ಪ್ರಯಾಣಗಳೂ ಮೊದಲೇ ಯೋಚಿಸಿ ಒಂದು ವಾರದ ರಜೆಯಿದ್ದರೆ ಮಾತ್ರ ಕೈಗೊಳ್ಳುವುದಾಗಿತ್ತು. ಹೀಗಾಗಿ ಕ್ಯಾಂಪಸ್ಸಿನಲ್ಲೇ ಬಿದ್ದಿರುತ್ತಿದ್ದೆವು. ಕ್ಯಾಂಪಸ್ಸಿನಲ್ಲಿದ್ದಾಗ ನಮ್ಮ ಮೇಷ್ಟರುಗಳನ್ನೂ ನೋಡುತ್ತಲೇ ಇರುತ್ತಿದ್ದೆವು.
ಸಿನೆಮಾ ನೋಡಲು ಹೋದಾಗ ಇರುವ ನಾಲ್ಕಾರು ಥಿಯೇಟರುಗಳಲ್ಲೇ ನಮ್ಮ ಗುರುಗಳೂ ಅವರ ಸಂಸಾರವೂ ಕಾಣುವುದು ಅಸಹಜವೇನೂ ಆಗಿರಲಿಲ್ಲ. ಸಂಜೆಯ ವೇಳೆಗೆ ’ಸಚ್ ಕಾ ಸಾಮನಾ’ ಸೀರಿಯಲ್ ನೋಡಬೇಕೆಂಬ ತುರ್ತು ಯಾರಿಗೂ ಇರುತ್ತಿರಲಿಲ್ಲ. ಹೀಗಾಗಿ ನಾವುಗಳು ಸಮಯ ಕಳೆಯಲು ನಮ್ಮ ಭಾಷೆ ಬಲ್ಲ ಗುರುಗಳ ಮನೆಗೆ ಹೋಗುವುದೂ ಅಲ್ಲಿಂದ ಪುಸ್ತಕಗಳನ್ನು ಎರವಲು ಪಡೆಯುವುದೂ, ಸಾಧ್ಯವಾದರೆ ಒಳ್ಳೆಯ ಊಟ ತಿಂಡಿಗಳು ಗಿಟ್ಟುತ್ತದೆಯೇ ಎಂದು ನೋಡುವುದೂ ಒಂದು ಕಾಯಕವಾಗಿತ್ತು.
ಇಂದಿನ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಕೂತು ಎಲ್ಲಿಂದಲೋ ಡೌನ್‍ಲೋಡ್ ಮಾಡಿದ ಕಮೀನೇ ಚಿತ್ರವನ್ನು ಖರ್ಚಿಲ್ಲದೇ ನೋಡುತ್ತಾನೆ. ಅಲ್ಲೇ ಕೂತು ಡ್ಯಾಡ್ ಜೊತೆ ಮಾತನ್ನೂ ಆಡುತ್ತಾನೆ, ಆ ಮಾತುಗಳನ್ನು ಆಡುತ್ತಲೇ ಡ್ಯೂಡ್ ಜೊತೆ ಚಾಟ್ ಮಾಡುತ್ತಾನೆ. ಮೂರುದಿನದ ರಜೆ ಬಂದರೆ ಮೇಕ್ ಮೈ ಟ್ರಿಪ್ಪಿನ ಸೈಟಿಗೆ ಹೋಗಿ ಕೂಲ್ ಡೀಲ್ ಯಾವುದಾದರೂ ಇದ್ದರೆ, ಟಿಕೆಟ್ ತೆಗೆದು ಮನೆಗೂ ಹೋಗಿ ಬಂದುಬಿಡುತ್ತಾನೆ. ಹಾಗೂ ಜಗತ್ತಿನ ಯಾವುದೋ ಮೂಲೆಯಲ್ಲಿರುವ ವರ್ಚುವಲ್ ಫ್ರೆಂಡನ್ನು ಸ್ಕೈಪ್ ಮೂಲಕ ಪುಸಲಾಯಿಸುತ್ತಾನೆ.
ಜಗತ್ತು, ತಂತ್ರಜ್ಞಾನ ಮೂಲಭೂತವಾಗಿ ಬದಲಾಗಿರುವಾಗ ವಿದ್ಯಾರ್ಥಿಗಳ-ಗುರುಗಳ ಸಂಬಂಧ ಮತ್ತು ಲಾವಾದೇವಿಗಳು ಬದಲಾಗುವುದೂ ಸಹಜವೇ ಆಗಿದೆ. ನಾವುಗಳು ಕೂತು ಈ ಜನರೇಷನ್ ಬಹಳ ಬಿಗಡಾಯಿಸಿಬಿಟ್ಟಿದೆ, ಗುರುಗಳೆಂದರೆ ಅವರಿಗೆ ತುಸುವಾದರೂ ಗೌರವವಿಲ್ಲ ಎಂದು ಕರುಬುತ್ತೇವೆ ನಮ್ಮ ಜನರೇಷನ್ನಿನಲ್ಲೂ ನಾವು ಲೇವಡಿ ಮಾಡುತ್ತಿದ್ದ ಗುರುಗಳಿರುತ್ತಿದ್ದರು, ಹೆದರುವ ಗುರುಗಳಿರುತ್ತಿದ್ದರು ಮತ್ತು ಗೌರವಿಸುವ ಗುರುಗಳೂ ಇರುತ್ತಿದ್ದರು. ಆದರೂ ಈಗಿನ ಜನರೇಷನ್ನಿಗೆ ತಮ್ಮ ಗುರುಗಳನ್ನು ಕಂಡರೆ ಒಂದು ಗುಡ್ ಮಾರ್ನಿಂಗ್ ಕೂಡಾ ಹೇಳುವ ಕನಿಷ್ಠ ಮರ್ಯಾದೆಯೂ ಇಲ್ಲ ಎಂದು ಕರುಬುವವರಲ್ಲಿ ನಾನೂ ಒಬ್ಬ.
ಮೊದಲಿಗೆ ವಿದ್ಯಾರ್ಥಿಗಳ ಮೆಸ್ಸಿಗೆ ಹೋಗಿ ಅವರೊಂದಿಗೆ ಹರಟೆ ಕೊಚ್ಚಿ ಒಂದು ಸಿಗರೇಟು ಬೆಳಗಿಸಿ ಬರುತ್ತಿದ್ದೆ. ಈಗ ಅದರಲ್ಲಿ ನನಗೆ ಅರ್ಥ ಕಾಣುತ್ತಿಲ್ಲ. ಹಿಪ್ ಹಾಪ್ ಸಂಗೀತದ ಬಗ್ಗೆ ನನಗೆ ಯಾವ ಜ್ಞಾನವೂ ಇಲ್ಲದ್ದು ಅವರ ತಪ್ಪಲ್ಲ. ಅವರು ಕೇವಲ ನನ್ನ ಜೊತೆಗೆ ಅರ್ಥಾತ್ ತಮ್ಮ ಗುರುಗಳ ಜೊತೆಗೆ ಬದಲಾದ ರೀತಿಯಲ್ಲಿ ಪ್ರವರ್ತಿಸುತ್ತಿಲ್ಲ. ಅವರುಗಳು ಜಗತ್ತಿನ ಜೊತೆಗೆ ವ್ಯಾಪಾರವನ್ನು ನಡೆಸುತ್ತಿರುವ ರೀತಿಯೇ ಭಿನ್ನವಾಗಿದೆ.
ಹಾಗೆಯೇ ಬೋಧನಾ ಕ್ರಮದಲ್ಲೂ ಅನೇಕ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳಿಗೆ ಇರುವ ತಂತ್ರಜ್ಞಾನದ ಅರಿವು ಅದ್ಭುತವಾದದ್ದು. ಏನೇ ವಿಚಾರವನ್ನೂ ಗೂಗಲ್ ಮೂಲಕ ಕಂಡುಹಿಡಿದು ವಾಪಸ್ಸು ನಮ್ಮತ್ತ ಪ್ರಶ್ನೆಗಳನ್ನು ಎಸೆಯುವ ತಾಕತ್ತು ಅವರಿಗಿದೆ. ಆದರೆ ಒಂದು ಮೂಲಭೂತ ಬದಲಾವಣೆಯನ್ನು ಸಮಯ ಕಳೆದಂತೆ ನಾನು ಕಂಡಿದ್ದೇನೆ. ಅದು ನಿಜಕ್ಕೂ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದೇ ಅನ್ನುವ ನಂಬುಗೆ ನನಗಿದೆ. ಉದಾಹರಣೆಗೆ ವಿದ್ಯಾರ್ಥಿಗಳು ತಮ್ಮ ಸಂಶೋಧನಾತ್ಮಕ ಬರವಣಿಗೆಯಲ್ಲಿ ಹೆಚ್ಚಿನ ಪರಿಕರಗಳನ್ನು ವೆಬ್ ಮೂಲಕ ಪಡೆಯುತ್ತಾರೆ. ವಿಕಿಪೀಡಿಯಾವೇ ಅವರಿಗೆ ಅಂತಿಮ ಅಥಾರಿಟಿ ಆಗಿಬಿಟ್ಟಿದೆ. ಗೂಗಲ್ ದೇವರ ಕೃಪಾಕಟಾಕ್ಷದಲ್ಲಿ ಬದುಕುವ ಅವರುಗಳಿಗೆ ಲೈಬ್ರರಿಗೆ ಹೋಗಿ ಹೊಸಪುಸ್ತಕದಿಂದ ಹೊಮ್ಮುವ ಹೊಸ ಅಂಟಿನ ವಾಸನೆಯನ್ನು ಆಘ್ರಾಣಿಸಿ, ಆಸಕ್ತಿಯಿಂದ ಪುಟ ತಿರುವಿಹಾಕುವ, ಜ್ಞಾನದ ಖಜಾನೆಯನ್ನು ಹುಡುಕಿ ನಡೆವ ಸಮಯವೂ ಆಸಕ್ತಿಯೂ ಕಡಿಮೆಯಾಗುತ್ತಿರುವಂತೆ ಭಾಸವಾಗುತ್ತಿದೆ.
ಎಸ್.ಎಂ.ಎಸ್.ಜನಾಂಗದವರ ಬರವಣಿಗೆಯ ಕೌಶಲವೂ ಅಷ್ಟಕ್ಕಷ್ಟೇ. ಉನ್ನತ ವಿದ್ಯಾಸಂಸ್ಥೆಗಳಲ್ಲಿರುವ ಇವರುಗಳ ಬರವಣಿಗೆ ಚೆನ್ನಾಗಿರುತ್ತದೆಂದು ಯಾರಾದರೂ ನಂಬಿ ಬಂದರೆ, ಅವರಿಗೆ ನಿರಾಶೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಚಿಕ್ಕಂದಿನಿಂದಲೂ ಕೊಡುವ ಒಂದು ಪ್ರಶ್ನೆಗಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ್ದನ್ನು ಹೆಕ್ಕುವ ತರಬೇತಿಯೇ ಕಾರಣವೇನೋ. ಹೀಗಾಗಿ ಅವರಿಗೆ ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿರಬಹುದು, ನಾಲ್ಕಕ್ಕಿಂತ ಹೆಚ್ಚು ಆಯ್ಕೆಗಳಿರಬಹುದು ಎಂದು ವಿವರಿಸುವುದು ಸರಳವೇನೂ ಅಲ್ಲ.
ಈಗಿನ ವಿದ್ಯಾರ್ಥಿಗಳು ತಮ್ಮ ಪಾಠ್ಯಕ್ರಮದಲ್ಲಿ ಎಷ್ಟು ಮಗ್ನರಾಗಿ ಅದನ್ನು ತಮ್ಮ ಕರಗತ ಮಾಡಿಕೊಳ್ಳುವ ಉತ್ಸಾಹದಲ್ಲಿರುತ್ತಾರೆಂದರೆ ಅವರ ಸಾಮಾನ್ಯ ಜ್ಞಾನ ಮತ್ತು ಇತರ ಓದು ಕುಂಠಿತವಾಗುತ್ತಿದೆಯೇ ಎಂದೂ ನನಗೆ ಅನುಮಾನ ಬರುತ್ತದೆ. ಉದಾಹರಣೆಗೆ ಸಾಹಿತ್ಯವೆಂದಕೂಡಲೇ ಅವರಿಗೆ ನೆನಪಿಗೆ ಬರುವುದು ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಮಾತ್ರವಾದರೆ ಅದೇನೂ ಉತ್ತಮ ಶಿಕ್ಷಣ/ಲಕ್ಷಣ ಅನ್ನಿಸುವುದಿಲ್ಲ. ಇಂಥ ಸ್ಪಷ್ಟತೆಯನ್ನು ಹೊಂದಿ - ಮೀನಿನ ಕಣ್ಣಿನಮೇಲಕ್ಕೆ ಗುರಿಯಿರಿಸಿರುವ ಅರ್ಜುನರಿಗೆ ವಿಶ್ವರೂಪದರ್ಶನ ಮಾಡಿಸುವ ಕೃಷ್ಣನ ಕೆಲಸ ಸರಳವಾದ್ದೇನೂ ಅಲ್ಲ. ಆ ಒಂದು ಸವಾಲು ನಾನು ಬೋಧಿಸುತ್ತಿರುವಂತಹ ಸಂಸ್ಥೆಗಳಲ್ಲಿ ಈಗೀಗ್ಗೆ ಹೆಚ್ಚಾಗಿ ಕಾಣಿಸುತ್ತಿದೆ ಅನ್ನಬಹುದು.
ನನ್ನ ವಿದ್ಯಾರ್ಥಿಗಳನ್ನು ನಾನು ಗೆಳೆಯರನ್ನಾಗಿಸಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. [ಯಾಕೆ ಗೆಳೆಯರನ್ನಾಗಿಸಿಕೊಳ್ಳಬೇಕು ಅನ್ನುವ ಇನ್ನೂ ಗಹನವಾದ ಪ್ರಶ್ನೆ ಇನ್ನೂ ಜೋರಾಗಿ ಕಾಡಿದೆ] ನನ್ನ ಜಗತ್ತಿನಲ್ಲಿ ನಾನಿರದೇ ಅವರ ಜಗತ್ತಿಗೆ ಹಣಕಿಹಾಕಿದಾಗ ಬಹುಶಃ ನಮ್ಮ ಮಾನಸಿಕ ಲಹರಿಗಳು ಒಂದೆಡೆ ಭೇಟಿಯಾಗುವ ಸಾಧ್ಯತೆಯಿರಬಹುದು. ಮೂರು ವರ್ಷಗಳ ಹಿಂದೆ ಬ್ಲಾಗ್ ಮೂಲಕ ಬರವಣಿಗೆಯನ್ನು ಕೈಗೊಳ್ಳಬಹುದು ಅನ್ನುವುದನ್ನು ನಾನು ವಿದ್ಯಾರ್ಥಿಗಳ ಮೂಲಕವೇ ಕಂಡುಕೊಂಡೆ. ಅದರಿಂದ ನನಗೆ ಆದ ವಿದ್ಯಾರ್ಥಿಗಳೆಯರು ಹಲವರು. ಆದರ ನನ್ನ ಬರಹದ ಲೋಕಕ್ಕೆ ಬಂದ ಇತರರೂ ಅನೇಕ. ಇದೇ ಒಂದು ಭಿನ್ನ ಮಾದ್ಯಮ ಅನ್ನುವ ಮನವರಿಕೆ ನನಗಾದದ್ದು ನಾನು ನನ್ನ ವಿದ್ಯಾರ್ಥಿಗಳ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ. ಈ ಕಾಣ್ಕೆ ನನಗೆ ಕಂಡ ಕೂಡಲೇ ಅವರೊಂದಿಗೆ ಮಾತನಾಡಲು ಸಂವಹಿಸಲು ಮತ್ತೊಂದು ಮಾಧ್ಯಮ ನನಗೆ ಸಿಕ್ಕಿತು. ಬ್ಲಾಗ್ ಮೂಲಕವೂ ಮಾತನಾಡಬಹುದಿತ್ತು, ಬ್ಲಾಗ್ ಬಗ್ಗೆಯೂ ಮಾತನಾಡಬಹುದಿತ್ತು.
ಹದಿನಾರು ವರ್ಷದ ಮಗನಿರುವ ನನಗೆ ನನ್ನ ಮಗನನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುವವರೇ ನನ್ನ ವಿದ್ಯಾರ್ಥಿಗಳು. ಎಲ್.ಓ.ಎಲ್ ಎಂದರೆ ಜೋರಾಗಿ ನಗುವುದು. ಬಿಆರ್‌ಬಿ ಅಂದರೆ ಕ್ಷಣದಲ್ಲೇ ವಾಪಸ್ಸಾಗುವೆ ಅನುವುದೂ, ಆರ್ಕುಟ್, ಫೇಸ್‍ಬುಕ್ ಏನೆಂದೂ ಅರಿಯದ ನನಗೆ ಆ ಬಗ್ಗೆ ಕಲಿಸಿರುವುದೂ, ಬರೇ ರಾಜ್‍ದೂತ್ ಯಜ್ಡಿಗಳ ಬಗ್ಗೆ ಮಾತ್ರ ಅರಿವಿದ್ದ ನಮ್ಮ ಜನಾಂಗಕ್ಕೆ ಹೊಸ ಬೈಕುಗಳ ಬಗ್ಗೆ - ಹೊಸ ಮೊಬೈಲುಗಳನ್ನು ಉಪಯೋಗಿಸುವಬಗ್ಗೆ, ಹೊಸತಂತ್ರಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ನಾನು ನನ್ನ ವಿದ್ಯಾರ್ಥಿಗಳು ಕಲಿಸಿದ್ದಾರೆ. ಹೀಗಾಗಿ ಅವರ ಜೊತೆಗಿನ ಸಂಬಂಧ ಮುಂಚಿಗಿಂತ ಭಿನ್ನವಾಗಿದೆ ಅನ್ನುವುದನ್ನಷ್ಟೇ ಹೇಳಬಲ್ಲೆ - ಆದರೆ ಅವನತಿಗೊಂಡಿದೆಯೇ? ಗೊತ್ತಿಲ್ಲ.
ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಇಲ್ಲೇ ವಾಸ್ತವ್ಯವಿರಬೇಕಿರುವ ಅವಶ್ಯಕತೆಯಿದ್ದ ಹಳೆಯ ಕಾಲದ ಪಾಠಕ್ರಮವನ್ನು ನಾವು ಪಾಲಿಸುತ್ತಿರುವುದರಿಂದ ಬಹುಶಃ ಸಂಬಂಧಗಳು ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಹನ ರೀತಿ ಪತನಗೊಂಡಿದೆ ಅಂತ ಆಗಾಗ ಅನ್ನಿಸುವುದುಂಟು.
ಮೊನ್ನೆ ಏರ್‌ಪೋರ್ಟಿನಲ್ಲಿ ಸಿಕ್ಕ ಒಬ್ಬ ವಿದ್ಯಾರ್ಥಿಯನ್ನು ಮಾತನಾಡಿಸ ಹೊರಟರೆ ಅವನು ನನ್ನನ್ನು ಗುರುತೇ ಹಿಡಿಯಲಿಲ್ಲ. ನಾನು ಬೇಸರಗೊಂಡೆ. ಈಗಿನ ಕಾಲದ ವಿದ್ಯಾರ್ಥಿಗಳೇ ಹೀಗೆ ಎಂದು ಮನಸ್ಸಿನಲ್ಲೇ ಕರುಬಿದೆ. ಸ್ವಲ್ಪ ಸಮಯದ ನಂತರ ಆತ ಬಳಿಗೆ ಬಂದು "ಪ್ರೊಫೆಸರ್... ಇದು ನೀವೇನಾ?" ಎಂದು ಕೇಳಿದ. "ಅಲ್ಲಯ್ಯಾ ನಾನು ಮಾತನಾಡಿಸುವ ಪ್ರಯತ್ನ ಮಾಡಿದರೂ ಮುಖ ತಿರುಗಿಸಿಕೊಂಡು ಹೋದವನು ಈಗ ಇದ್ದಕ್ಕಿದ್ದ ಹಾಗೆ ಬಂದು ಮಾತನಾಡಿಸುತ್ತಿದ್ದೀಯಲ್ಲಾ?" ಅಂತ ಕೇಳಿದರೆ. "ನೀವು ಇಷ್ಟುದ್ದ ಕೂದಲು ಬೆಳೆಸಿದ್ದೀರಿ. ಯೂ ಹ್ಯಾವ್ ಚೇಂಜ್ಡ್.. ಯೂ ಲುಕ್ ಕೂಲ್. ನಿಮ್ಮ ಈಚಿನ ಫೋಟೊವನ್ನು ಫೇಸ್‍ಬುಕ್ ಮೇಲೆ ಹಾಕಿದ್ದರೆ ಈ ಫಜೀತಿಯೇ ಇರುತ್ತಿರಲಿಲ್ಲ" ಅಂದ. ಆತ ತನ್ನ ಕೂದಲನ್ನು ಕತ್ತರಿಸಿದ್ದ. ಚೆಡ್ಡಿಹಾಕಿ ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದವನು ಸೂಟ್ ಧರಿಸಿದ್ದ. ಕೂದಲನ್ನು ಕತ್ತರಿಸಿದ್ದ. "ಯೂ ಲುಕ್ ಹಾಟ್" ಅಂದೆ. ಅವನು ಬೆವರೊರೆಸಿಕೊಂಡ.....
ಹೀಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಸಂಬಂಧಗಳು ವಿಕಸನಗೊಳ್ಳುವ ರೀತಿ ಬದಲಾಗುತ್ತಿದೆ. ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಮಾತನಾಡಲು ಅವರನ್ನು ಅರ್ಥಮಾಡಿಕೊಂಡು ಅವರ ಅದ್ಭುತ ಜಗತ್ತಿಗೆ ಪ್ರವೇಶಿಸಬೇಕೆನ್ನುವುದನ್ನು ಅವರು ನನಗೆ ಬಾರಿಬಾರಿ ಕಲಿಸಿದ್ದಾರೆ. ನಮ್ಮ ಜಮಾನಾದಲ್ಲಿ ಟಿವಿ ಇರಲಿಲ್ಲ ಅನ್ನುವುದು ಅವರಿಗೆ ಮಹತ್ವದ ಸಂಗತಿ ಅನ್ನಿಸುವುದೇ ಇಲ್ಲ. ಹಾಗಿರುವುದೇ ಸರಿ!
ತುಂಬ ಚೆನ್ನಾಗಿದೆ. ಎಲ್ಲ ಹಾಳಾಗಿದೆ ಎನ್ನುತ್ತ ಪ್ರಾಯ ಸಂದ ಹಾಗೆ ಸಿನಿಕರಾಗುವ ಅಪಾಯದ ಬಗ್ಗೆ ಎಚ್ಚರಿಸಿದ್ದೀರಿ. ಎಪ್ಪತ್ತು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮ್ಮ ಕಾಲದಲ್ಲಿ ಕಾಲೇಜು ತುಂಬ ಗಲಾಟೆ, ದೊಂಬಿ ಸಾಮಾನ್ಯವಾಗಿದ್ದದ್ದನ್ನು ನೆನಪಿಸಿಕೊಂಡರೆ ವರ್ತಮಾನದ ಕಾಲೇಜು ರಂಗ ಅಷ್ಟೇನೂ ಕುಲಗೆಟ್ಟಿಲ್ಲವೆಂದು ಅರಿವಾಗುತ್ತದೆ. ಇಂದಿನ ಮಕ್ಕಳು ಸ್ಪರ್ಧೆಯ ಯುಗಕ್ಕೆ ತಯಾರಾಗಿದ್ದಾರೆಂದೇ ನನಗನ್ನಿಸುತ್ತದೆ. ಯಾವೊಂದು ದಿನವೂ ನನ್ನ ಶಿಕ್ಷಕ ವೃತ್ತಿ ನೀರಸ ಅನ್ನಿಸಿಲ್ಲ - ಹಿಂದಿಗಿಂತಲೂ ಅಧಿಕ ಖುಷಿ ಕೊಡುತ್ತಿದೆ - ಹೆಚ್ಚು ಉತ್ಸಾಹೀ ಜವಾಬ್ದಾರಿ ಮಕ್ಕಳಿಂದಾಗಿ.
ReplyDeleteಎ.ಪಿ. ರಾಧಾಕೃಷ್ಣ
Good write up. I am not a teacher but my wife is. Some of these I hear her talking about.
ReplyDeleteHaven't seen any story from you of late.
Only yesterday I was reading your 'avaravara satya'- a good story indeed!
jayadev prasad